ಭುವನೇಶ್ವರ (ಒಡಿಶಾ): ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರ ಮಾಜಿ ಆಪ್ತ ಸಹಾಯಕ ಹಾಗೂ ಮಾಜಿ ಐಎಎಸ್ ಅಧಿಕಾರಿ ವಿ ಕೆ ಪಾಂಡಿಯನ್ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ಒಂದು ದಿನದ ಅಂತರದಲ್ಲೇ ಕ್ಯಾಬಿನೆಟ್ ಸಚಿವ ದರ್ಜೆ ಸ್ಥಾನಮಾನದೊಂದಿಗೆ '5ಟಿ' (ಪರಿವರ್ತನಾ ಉಪಕ್ರಮಗಳು) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಸೋಮವಾರ ಒಡಿಶಾ ಕೇಡರ್ನ 2000 ಬ್ಯಾಚ್ನ ಐಎಎಸ್ ಅಧಿಕಾರಿ ವಿ ಕೆ ಪಾಂಡಿಯನ್ ತಮ್ಮ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ನಿವೃತ್ತಿ ಪಡೆದ ಬೆನ್ನಲ್ಲೇ ಪಾಂಡಿಯನ್ ರಾಜ್ಯ ರಾಜಕೀಯಕ್ಕೆ ಎಂಟ್ರಿ ಪಡೆಯುತ್ತಾರೆ ಎನ್ನುವ ಊಹಾಪೋಹಗಳು ಎದ್ದಿದ್ದವು. ಇದೀಗ ಆ ಊಹಾಪೋಹ ನಿಜವಾಗಿದ್ದು, ಸಿಎಂ ನವೀನ್ ಪಟ್ನಾಯಕ್, ಪಾಂಡಿಯನ್ ಅವರಿಗೆ ರಾಜ್ಯ ರಾಜಕೀಯದಲ್ಲಿ ಪ್ರಮುಖವಾದ ಹುದ್ದೆಯನ್ನು ನೀಡಿದ್ದಾರೆ. ಪಾಂಡಿಯನ್ 5ಟಿ ಅಧ್ಯಕ್ಷರಾಗಿ ಹಾಗೂ ಸಿಎಂ ನವೀನ್ ಪಟ್ನಾಯಕ್ ಅವರ ಬಳಗ ಸೇರಿಕೊಂಡಿದ್ದಾರೆ.
ಇತ್ತೀಚಿನ ನೇಮಕಾತಿಯ ಪ್ರಕಾರ ಪಾಂಡಿಯನ್ ಅವರು ನೇರವಾಗಿ ಮುಖ್ಯಮಂತ್ರಿ ಪಟ್ನಾಯಕ್ ಅವರ ಅಡಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸಾಮಾನ್ಯ ಆಡಳಿತ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆ ತಿಳಿಸಿದೆ. ಇದಕ್ಕೂ ಹಿಂದೆ 2011ರಲ್ಲಿ ಪಾಂಡಿಯನ್ ಅವರು ಮುಖ್ಯಮಂತ್ರಿ ಕಚೇರಿಗೆ ಎಂಟ್ರಿ ಕೊಟ್ಟಿದ್ದರು. ಅಂದಿನಿಂದ ಪಟ್ನಾಯಕ್ ಅವರ ಖಾಸಗಿ ಕಾರ್ಯದರ್ಶಿಯಾಗಿ ಅವರು ಕಾರ್ಯನಿರ್ವಹಿಸಿದ್ದರು.
2019ರಲ್ಲಿ ಪಟ್ನಾಯಕ್ ಅವರು ಐದನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ ಸರ್ಕಾರಿ ಇಲಾಖೆಗಳಲ್ಲಿ ಕೆಲವು ಪರಿವರ್ತನಾ ಉಪಕ್ರಮಗಳನ್ನು ಜಾರಿಗೆ ತರಲು ಪಾಂಡಿಯನ್ ಅವರಿಗೆ '5ಟಿ' ಕಾರ್ಯದರ್ಶಿಯಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಆಡಳಿತಾರೂಢ ಬಿಜೆಡಿಯ ಕೆಲವು ಮೂಲಗಳು, ಪಾಂಡಿಯನ್ ಅವರ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ. ಮುಂದಿನ ವರ್ಷ ಆರಂಭದಲ್ಲಿ ನಡೆಯಲಿರುವ ಒಡಿಶಾ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅವರಿಗೆ ಮಹತ್ವದ ಸ್ಥಾನಮಾನ ನೀಡುವ ಸಾಧ್ಯತೆ ಇದೆ ಎಂದು ತಿಳಿಸಿವೆ.
ಮುಖ್ಯಮಂತ್ರಿ ಅವರ ಆಪ್ತ ಸಹಾಯಕರಾಗಿ ಪಾಂಡಿಯನ್ ಅವರಿಗೆ ಪ್ರಾಮುಖ್ಯತೆ ದೊರತ ವೇಳೆ ಅವರು ಕೆಲವೊಂದು ವಿವಾದಗಳಲ್ಲಿ ಸಿಲುಕಿದ್ದರು. ವಿರೋಧ ಪಕ್ಷಗಳು, ಪಾಂಡಿಯನ್ ಅವರು ರಾಜಕೀಯ ಲಾಭಗಳಿಗಾಗಿ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದವು. ಇದೀಗ ಅವರಿಗೆ ಸಿಎಂ ಪಟ್ನಾಯಕ್ ಮಹತ್ವದ ಜವಾಬ್ದಾರಿ ನೀಡಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಪಾಂಡಿಯನ್ ಅವರು 2002ರಲ್ಲಿ ಕಲಹಂಡಿ ಜಿಲ್ಲೆಯ ಧರ್ಮಗಢದ ಉಪ ಜಿಲ್ಲಾಧಿಕಾರಿಯಾಗಿ ತಮ್ಮ ಸರ್ಕಾರಿ ವೃತ್ತಿಜೀವನವನ್ನು ಆರಂಭಿಸಿದವರು. ನಂತರ 2005ರಲ್ಲಿ ಮಯೂರ್ಭಂಜ್ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ, ನಂತರ 2007ರಲ್ಲಿ ಗಂಜಾಂನ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಗಂಜಾಂನ ಜಿಲ್ಲಾಧಿಕಾರಿಯಾಗಿದ್ದ ವೇಳೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಆಪ್ತವಾದರು.
ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ನಲ್ಲಿ ಸತೀಶ್ಗೆ ಹಿಂಸೆ ಆಗುತ್ತಿದೆ: ರಮೇಶ್ ಜಾರಕಿಹೊಳಿ