ನವದೆಹಲಿ/ಗಾಜಿಯಾಬಾದ್: ಪಾಕಿಸ್ತಾನದ ಮಹಿಳಾ ಏಜೆಂಟ್‌ನೊಂದಿಗೆ ರಹಸ್ಯ ಮಾಹಿತಿ ಹಂಚಿಕೊಂಡ ಆರೋಪದ ಮೇಲೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಓರ್ವ ನೌಕರನನ್ನು ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು 27 ವರ್ಷದ ನವೀನ್ ಪಾಲ್ ಎಂದು ಗುರುತಿಸಲಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಆರೋಪಿ ನವೀನ್ ಪಾಲ್ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಆಗಿ ಕೆಲಸ ಮಾಡುತ್ತಿದ್ದಾನೆ. ಗಾಜಿಯಾಬಾದ್‌ನ ಕ್ರಾಸಿಂಗ್ ರಿಪಬ್ಲಿಕ್ ಪ್ರದೇಶದಲ್ಲಿ ವಾಸವಾಗಿದ್ದ ಈತ ಅನುಮಾನಾಸ್ಪದ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ. ಆಕೆಯ ಹನಿಟ್ರ್ಯಾಪ್ ಬಲೆಗೆ ನವೀನ್ ಪಾಲ್ ಬಂದಿದ್ದ. ವಾಟ್ಸ್ಆ್ಯಪ್ನಲ್ಲಿ 'ಅಂಜಲಿ ಕೋಲ್ಕತ್ತಾ' ಎಂಬ ಹೆಸರಿನ ನಂಬರ್ನೊಂದಿಗೆ ಸಂಶಯಾಸ್ಪದ ಸಂದೇಶ ಹಂಚಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ನವೀನ್ ಪಾಲ್ ಜೊತೆಗೆ ಸಂಪರ್ಕ ಹೊಂದಿದ್ದ ಈ ಮಹಿಳೆ ಪಾಕಿಸ್ತಾನದ ಏಜೆಂಟ್ ಎಂಬ ಶಂಕೆ ವ್ಯಕ್ತವಾಗಿದೆ. ಭಾರತದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಗೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ ಇತರ ರಹಸ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ, ಪಾಲ್ ಫೋನ್‌ನ ಬ್ಯಾಕ್ ಅಪ್ ವಿಭಾಗದಿಂದ 'ರಹಸ್ಯ' ದಾಖಲೆಗಳನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ. ಜೊತೆಗೆ ವರ್ಗೀಕೃತ ದಾಖಲೆಗಳ ಸ್ಕ್ರೀನ್‌ಶಾಟ್‌ಗಳು ಸಹ ಕಂಡುಬಂದಿವೆ ಎಂದು ಮೂಲಗಳು ಹೇಳಿವೆ.
ರಹಸ್ಯ ದಾಖಲೆಗಳ ಹಂಚಿಕೆಗೆ ಪ್ರತಿಯಾಗಿ ಆರೋಪಿ ನವೀನ್ ಪಾಲ್ ತಮ್ಮ ಮೊಬೈಲ್ ನಂಬರ್‌ನಲ್ಲಿ ಅನುಮಾನಾಸ್ಪದ ವಹಿವಾಟುಗಳನ್ನು ಸ್ವೀಕರಿಸಿದ್ದಾರೆ. ಈ ಕುರಿತ ಕೇಂದ್ರ ಗುಪ್ತಚರ ಬ್ಯೂರೋದ ಮಾಹಿತಿ ಮೇರೆಗೆ ಗಾಜಿಯಾಬಾದ್ ಪೊಲೀಸರು ದೇವಸ್ಥಾನವೊಂದರ ಬಳಿ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ ಆ್ಯಪಲ್ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಹಣದ ದುರಾಸೆಯಿಂದ ದಾಖಲೆಗಳ ರವಾನಿಸಿರುವ ಅನುಮಾನ ವ್ಯಕ್ತವಾಗಿದೆ. ಈ ಬೆಳವಣಿಗೆಯ ಬಗ್ಗೆ ವಿದೇಶಾಂಗ ಸಚಿವಾಲಯದ ಗಮನಕ್ಕೆ ತರಲಾಗಿದೆ.
ಆರೋಪಿಯಿಂದ ಮೊಬೈಲ್ ಫೋನ್ ಹಾಗೂ ಗೌಪ್ಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 61 ಕಾಮಗಾರಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಗಾಜಿಯಾಬಾದ್ ಡಿಸಿಪಿ ಶುಭಂ ಪಟೇಲ್ ತಿಳಿಸಿದ್ದಾರೆ. ಸದ್ಯ ಆರೋಪಿ ನವೀನ್ ಪಾಲ್ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ- 2008 ಹಾಗೂ ಅಧಿಕೃತ ರಹಸ್ಯ ಕಾಯ್ದೆ-1923ರ ಸೆಕ್ಷನ್ 3, 5 ಮತ್ತು 9ರ ಅಡಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಡಿಆರ್‌ಡಿಒ ನಿರ್ದೇಶಕನ ಹನಿಟ್ರ್ಯಾಪ್: ಎರಡು ತಿಂಗಳ ಹಿಂದೆ ಇದೇ ರೀತಿಯಾಗಿ ಪಾಕಿಸ್ತಾನದ ಮಹಿಳೆಯ ಹನಿಟ್ರ್ಯಾಪ್ ಬಲೆಗೆ ಬಿದ್ದು ರಹಸ್ಯ ದಾಖಲೆ ಹಂಚಿಕೊಂಡ ಆರೋಪದ ಮೇಲೆ ಪುಣೆಯಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ನಿರ್ದೇಶಕ ಪ್ರದೀಪ್ ಕುರುಲ್ಕರ್ ಅವರನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನದ ಮಹಿಳಾ ಏಜೆಂಟ್ ಜಾರಾ ದಾಸ್ ಗುಪ್ತಾ ಎಂಬುವವರ ಜೊತೆಗೆ ಪ್ರದೀಪ್ ಕುರುಲ್ಕರ್ ನಂಟು ಹೊಂದಿದ್ದರು ಎಂದು ಈಗಾಗಲೇ ಕೋರ್ಟ್ಗೆ ತನಿಖಾ ಅಧಿಕಾರಿಗಳು ಚಾರ್ಜ್ಶೀಟ್ ಸಹ ಸಲ್ಲಿಕೆ ಮಾಡಿದ್ದಾರೆ.
ಇದನ್ನೂ ಓದಿ: ಹನಿಟ್ರ್ಯಾಪ್ ಕೇಸ್: ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಡಿಆರ್‌ಡಿಒ ನಿರ್ದೇಶಕ ಪ್ರದೀಪ್ ಕುರುಲ್ಕರ್