ಮುಂಬೈ (ಮಹಾರಾಷ್ಟ್ರ): ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಂದ ಎಂಎಫ್ ಹುಸೇನ್ ಪೇಂಟಿಂಗ್ ಅನ್ನು 2 ಕೋಟಿ ರೂಪಾಯಿಗೆ ಖರೀದಿಸಲು ಅಂದಿನ ಕಾಂಗ್ರೆಸ್ ಕೇಂದ್ರ ಸಚಿವರೊಬ್ಬರು ಬಲವಂತಗೊಳಿಸಿದ್ದರು ಎಂದು ಯೆಸ್ ಬ್ಯಾಂಕ್ ಪ್ರವರ್ತಕ ರಾಣಾ ಕಪೂರ್ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಮಾಹಿತಿ ನೀಡಿದ್ದಾರೆ.
ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ಏಜೆನ್ಸಿ ಸಲ್ಲಿಸಿದ ಚಾರ್ಜ್‌ಶೀಟ್ ಪ್ರಕಾರ ಅಂದಿನ ಪೆಟ್ರೋಲಿಯಂ ಸಚಿವ ಮುರಳಿ ದೇವೋರಾ ಅವರು ಪೈಂಟಿಂಗ್ ಖರೀದಿಸುವಂತೆ ಒತ್ತಾಯಿಸಿದ್ದರು. ಪೈಂಟಿಂಗ್ ಮಾರಾಟದ ಆದಾಯವನ್ನು ನ್ಯೂಯಾರ್ಕ್ನಲ್ಲಿ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಚಿಕಿತ್ಸೆಗೆ ಬಳಸಲಾಗುವುದು ಎಂದು ಯೆಸ್ ಬ್ಯಾಂಕ್ ಪ್ರವರ್ತಕರಿಗೆ ದೇವೋರಾ ಹೇಳಿದ್ದರು ಎಂದು ಕಪೂರ್ ಇಡಿಗೆ ತಿಳಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ ಸರ್ಕಾರದ ಆಡಳಿತ ಸಮಯದಲ್ಲಿ ಮುರಳಿ ದೇವೋರಾ ಪೆಟ್ರೋಲಿಯಂ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಎಂಎಫ್ ಹುಸೇನ್ ಪೇಂಟಿಂಗ್ ಖರೀದಿಗೆ ಪ್ರತಿಯಾಗಿ ಕಪೂರ್‌ಗೆ ಪದ್ಮಭೂಷಣ ಪ್ರಶಸ್ತಿ ಮತ್ತು ಹೆಚ್ಚಿನ ವ್ಯಾಪಾರದ ಭರವಸೆಯನ್ನು ಕಾಂಗ್ರೆಸ್ ನಾಯಕ ದೇವೋರಾ ನೀಡಿದ್ದರು ಎಂದು ಏಜೆನ್ಸಿ ಸಲ್ಲಿಸಿದ ಚಾರ್ಜ್‌ಶೀಟ್ ಹೇಳಿದೆ.
ರಾಣಾ ಕಪೂರ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣವನ್ನು ಇಡಿ ತನಿಖೆ ನಡೆಸುತ್ತಿದ್ದು, ಗೌತಮ್ ಥಾಪರ್ ಅವರ ಅವಂತಾ ಕಂಪನಿಗೆ ಅಕ್ರಮವಾಗಿ 1,900 ಕೋಟಿ ರೂಪಾಯಿ ಸಾಲ ನೀಡಿದ ಆರೋಪದ ಮೇಲೆಯೂ ರಾಣಾ ಕಪೂರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಗೌತಮ್ ಥಾಪರ್ ಅವರ ಕಂಪನಿಗೆ ಯೆಸ್ ಬ್ಯಾಂಕ್‌ನಿಂದ ಸುಮಾರು 1,900 ಕೋಟಿ ರೂಪಾಯಿ ಸಾಲ ನೀಡಲು ಕಪೂರ್‌ಗೆ 300 ಕೋಟಿ ರೂಪಾಯಿ ಲಂಚ ನೀಡಲಾಗಿದೆ ಎಂದು ಇಡಿ ಆರೋಪಿಸಿದೆ.
ಇದನ್ನೂ ಓದಿ: ಕರ್ತವ್ಯಕ್ಕೆ ಹಾಜರಾದ ದಿನವೇ ಲಂಚ ಆರೋಪ; ಪ್ರೊಬೇಷನರಿ ಅಬಕಾರಿ ನಿರೀಕ್ಷಕಿ ಎಸಿಬಿ ವಶಕ್ಕೆ