ಚೆನ್ನೈ(ತಮಿಳುನಾಡು): ಬಹು ಅಂಗಾಂಗ ವೈಫಲ್ಯದಿಂದ 17 ವರ್ಷದ ಫುಟ್‌ಬಾಲ್ ಆಟಗಾರ್ತಿ ಪ್ರಿಯಾ ಮಂಗಳವಾರ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಅವರ ಕುಟುಂಬ ಮತ್ತು ಸ್ನೇಹಿತರು ವೈದ್ಯಕೀಯ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂದು ಆರೋಪಿಸಿದ್ದಾರೆ.
ಮೂಲಗಳ ಪ್ರಕಾರ, ಕೆಲವು ದಿನಗಳ ಹಿಂದೆ ಪೆರಿಯಾರ್ ನಗರದ ಸರ್ಕಾರಿ ಸರ್ಬನ್ ಆಸ್ಪತ್ರೆಯಲ್ಲಿ ಪ್ರಿಯಾ ಬಲಗಾಲಿನ ಕೀಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರ ಅನಾರೋಗ್ಯಕ್ಕೆ ಒಳಗಾದ ಪ್ರಿಯಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಜೀವ್ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಶಸ್ತ್ರಚಿಕಿತ್ಸೆಯ ನಂತರ ರಕ್ತದ ಹರಿವಿನ ಸಮಸ್ಯೆಯಿಂದಾಗಿ ಆಕೆಯ ಬಲಗಾಲು ಕತ್ತರಿಸಲಾಯಿತು. ನಂತರ ತೀವ್ರ ನಿಗಾ ಘಟಕದಲ್ಲಿ ನರವಿಜ್ಞಾನಿಗಳು ಮತ್ತು ಮೂಳೆಚಿಕಿತ್ಸಕರು ತಜ್ಞರ ತಂಡದ ಆರೈಕೆಯಲ್ಲಿದ್ದರು. ಮಗಳವಾರ ರಕ್ತದ ಹರಿವಿನ ಸಮಸ್ಯೆಯಿಂದ ಅವರ ಮೂತ್ರಪಿಂಡ, ಹೃದಯ ಮತ್ತು ಶ್ವಾಸಕೋಶ ನಿಷ್ಕ್ರಿಯಗೊಂಡು ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಸಚಿವ ಎಂ ಸುಬ್ರಮಣಿಯನ್ ಅವರು ಪ್ರಿಯಾ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಮತ್ತು ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಘೋಷಿಸಿದ್ದಾರೆ ಎಂದು ಹೇಳಿದರು. ಈ ವಿಚಾರವನ್ನು ರಾಜಕೀಯಗೊಳಿಸಬಾರದು ಎಂದು ಹೇಳಿದ ಅವರು ಆಟಗಾರ್ತಿಯ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ವಿರೋಧ ಪಕ್ಷದ ನಾಯಕ ಕೆ ಪಳನಿಸ್ವಾಮಿ ವೈದ್ಯಕೀಯ ನಿರ್ಲಕ್ಷ್ಯದಿಂದ ಪ್ರಿಯಾ ಸಾವನ್ನಪ್ಪಿದ್ದು, ಆಕೆಯ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಟ್ವೀಟ್‌ನಲ್ಲಿ ಒತ್ತಾಯಿಸಿದ್ದಾರೆ. ಬಿಜೆಪಿ ರಾಜ್ಯ ಮುಖ್ಯಸ್ಥ ಕೆ ಅಣ್ಣಾಮಲೈ ಈ ಅಸಮರ್ಥ ಡಿಎಂಕೆ ಆಡಳಿತದಲ್ಲಿ ಪ್ರತಿಯೊಂದು ಇಲಾಖೆಯು ನಾಶವಾಗುತ್ತಿದೆ ಎಂದು ಹೇಳಿದ್ದಾರೆ. ಈ ನಡುವೆ ಪೆರಿಯಾರ್ ನಗರದಲ್ಲಿನ ಸ್ಥಳೀಯ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ : ಸಾನಿಯಾ ಹುಟ್ಟುಹಬ್ಬಕ್ಕೆ ಶೋಯೆಬ್ ವಿಶ್.. ಬೇರ್ಪಡೆ ವದಂತಿಗೆ ಬ್ರೇಕ್