ಶ್ರೀನಗರ (ಜಮ್ಮು ಕಾಶ್ಮೀರ): ಕಾಶ್ಮೀರ ಕಣಿವೆಯಲ್ಲಿ ಲಘು ಹಿಮಪಾತ ಹಾಗೂ ಜಮ್ಮುವಿನಲ್ಲಿ ಆವರಿಸಿದ ದಟ್ಟವಾದ ಮಂಜಿನಿಂದಾಗಿ ಇಂದು ಸಂಚಾರಕ್ಕೆ ಅಡ್ಡಿಯಾಗಿದೆ. ಆದ್ರೆ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಿಕ್ಕಿಬಿದ್ದ ವಾಹನಗಳು ಮಾತ್ರ ಇಂದು ಮುಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ 6 ದಿನಗಳಲ್ಲಿ ಶುಷ್ಕ ಹವಾಮಾನ ಇರಲಿದೆ ಎಂದು ಹವಾಮಾನ ಕಚೇರಿ ಮುನ್ಸೂಚನೆ ನೀಡಿದೆ. ಕಾಶ್ಮೀರ ಕಣಿವೆಯಲ್ಲಿ ಶನಿವಾರ ಹಗುರವಾದ ಹಿಮಪಾತವಾಗಿದ್ದು, ಮಧ್ಯಾಹ್ನದ ವೇಳೆಗೆ ತೆರವುಗೊಂಡಿದೆ. ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಮರು ನಿಗದಿಪಡಿಸಿ, ಶನಿವಾರ ಪುನರಾರಂಭಿಸಲಾಗುವುದು ಎಂದು ವಿಮಾನ ಯಾನ ಪ್ರಾಧಿಕಾರವು ತಿಳಿಸಿದೆ.
ಸ್ಥಳೀಯವಾಗಿ 'ಚಿಳ್ಳೈ ಕಲಾನ್' ಎಂದು ಕರೆಯಲ್ಪಡುವ ಈ ಕಠಿಣ ಚಳಿಗಾಲವು ಜನವರಿ 31 ರಂದು ಕೊನೆಗೊಳ್ಳುತ್ತದೆ. ಶ್ರೀನಗರದಲ್ಲಿ ಶನಿವಾರ ಕನಿಷ್ಠ ತಾಪಮಾನವಾಗಿ ಮೈನಸ್ 4 ಡಿಗ್ರಿ ಸೆಲ್ಸಿಯಸ್, ಪಹಲ್ಗಂನಲ್ಲಿ ಮೈನಸ್ 5.1 ಮತ್ತು ಗುಲ್ಮಾರ್ಗ್ ಮೈನಸ್ 10 ರಷ್ಟು ತಾಪಮಾನ ದಾಖಲಾಗಿತ್ತು.