ನವದೆಹಲಿ: ರಾಷ್ಟ್ರ ರಾಜಧಾನಿಯ ಜಹಾಂಗಿರ್ ಪುರಿ ಮತ್ತು ಆನಂದ್ ವಿಹಾರ್ ಪ್ರದೇಶಗಳನ್ನು ಒಳಗೊಂಡಂತೆ ಕೆಲ ಪ್ರದೇಶಗಳಲ್ಲಿ ಇಂದು ಮುಂಜಾನೆ ಮಂಜು ಆವರಿಸಿ ಗೋಚರತೆ ಕೊಂಚ ಕಡಿಮೆಯಾಗಿತ್ತು.
ಭಾರತ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಗರಿಷ್ಠ ಮತ್ತು ಕನಿಷ್ಠ ಅಂದರೆ 18 ಮತ್ತು 10 ಡಿಗ್ರಿ ಸೆಲ್ಸಿಯಸ್ ತಾಪಮಾನ ಇಂದು ಬೆಳಗ್ಗೆ ವರದಿಯಾಗಿದೆ. ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ವ್ಯವಸ್ಥೆಯ ಪ್ರಕಾರ, ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಇಂದು ಅತ್ಯಂತ ಕಳಪೆ 309 ಎಂದು ದಾಖಲಾಗಿದೆ.
0-50 ರ ನಡುವಿನ ಎಕ್ಯೂಐ ಅನ್ನು ಉತ್ತಮವೆಂದು ಪರಿಗಣಿಸಲಾಗಿದೆ. 51-100 ತೃಪ್ತಿಕರವಾದರೆ, 101- 200 ಮಧ್ಯಮ, 201- 300 ಕಳಪೆ, 301-400 ತುಂಬಾ ಕಳಪೆ ಮತ್ತು 401-500 ಅನ್ನು ತೀವ್ರವೆಂದು ಪರಿಗಣಿಸಲಾಗಿದೆ. ಇನ್ನೂ ನಗರದಲ್ಲಿ ಮನೆಯಿಲ್ಲದ ಜನರಿಗೆ ಈ ಚಳಿಯ ರಾತ್ರಿ ಕಳೆಯುವುದು ಒಂದು ರೀತಿಯ ಅಗ್ನಿಪರೀಕ್ಷೆಯಾಗಿದೆ. ಇನ್ನೂ ಅನೇಕರು ಕಶ್ಮೀರಿ ಗೇಟ್ ಪ್ರದೇಶದಲ್ಲಿರುವ 'ರಾತ್ರಿ ಆಶ್ರಯ ಕೇಂದ್ರ'ಗಳಲ್ಲಿ ಆಶ್ರಯ ಪಡೆದಿದ್ದಾರೆ.
ರಾತ್ರಿ ಆಶ್ರಯ ಕೇಂದ್ರದ ಉಸ್ತುವಾರಿ ಅಂಕಿತ್ ಎಎನ್‌ಐಯೊಂದಿಗೆ ಮಾತನಾಡಿ, 30 ಜನರು ಇಲ್ಲಿ ಆಶ್ರಯ ಪಡೆಯುತ್ತಾರೆ. ಕೋವಿಡ್ ಹಿನ್ನೆಲೆ ಮಾಸ್ಕ್ ವಿತರಿಸಲಾಗುತ್ತದೆ. ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ನಡೆಸಲಾಗುತ್ತಿದ್ದು, ದೇಹದ ಉಷ್ಣತೆಯಲ್ಲಿ ವ್ಯತ್ಯಾಸ ಕಂಡುಬಂದರೆ ಅಥವಾ ಅಸ್ವಸ್ಥರಾದರೆ ಸ್ಥಳೀಯ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆಯೆಂದು ಮಾಹಿತಿ ನೀಡಿದರು.
ಈ ಸುದ್ದಿಯನ್ನೂ ಓದಿ: ವಿಡಿಯೋ: ಸುಹಾಗ್ ಗ್ರೀನ್ ವ್ಯಾಲಿಯಲ್ಲಿ ಭಾರೀ ಬೆಂಕಿ ಅವಘಡ
ಇಲ್ಲಿ ಆಶ್ರಯ ಪಡೆದ ವ್ಯಕ್ತಿಯೊಬ್ಬರು ಮಾತನಾಡಿ, ಇಲ್ಲಿ ಮಲಗಲು ವ್ಯವಸ್ಥೆಯಿದ್ದು, ನಮಗೆ ಆಹಾರ, ಬಟ್ಟೆ, ಕಂಬಳಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನಾವು ಅನಾರೋಗ್ಯಕ್ಕೆ ಒಳಗಾಗಿದ್ದರೆ ಉಚಿತ ವೈದ್ಯಕೀಯ ಸೇವೆ ಮತ್ತು ಔಷಧಿ ಕೂಡ ಪಡೆಯಬಹುದು ಎಂದು ತಿಳಿಸಿದರು.