ಮೋತಿಹಾರಿ(ಬಿಹಾರ): ಪೂರ್ವ ಚಂಪಾರಣ್ ಜಿಲ್ಲೆಯ ರಾಮಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ದುರ್ಘಟನೆ ಸಂಭವಿಸಿದ್ದು, ಕೆರೆಯಲ್ಲಿ ಮುಳುಗಿ ಐವರು ಬಾಲಕಿಯರು ಪ್ರಾಣ ಕಳೆದುಕೊಂಡಿದ್ದಾರೆ. ಒಬ್ಬರನ್ನೊಬ್ಬರು ರಕ್ಷಣೆ ಮಾಡಲು ಹೋಗಿ ಇವರು ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.
ಮೇಕೆ ಮೇಯಿಸಲು ಎಲ್ಲ ಬಾಲಕಿಯರು ಕೆರೆಯ ಕಡೆಗೆ ತೆರಳಿದ್ದರು. ಈ ವೇಳೆ, ಬಾಲಕಿಯೋರ್ವಳು ಸ್ನಾನ ಮಾಡುವ ಉದ್ದೇಶದಿಂದ ಕೆರೆಯೊಳಗೆ ಇಳಿದಿದ್ದಾಳೆ. ಮುಳುಗಲು ಆರಂಭಿಸಿದ್ದರಿಂದ ರಕ್ಷಣೆ ಮಾಡಲು ಮತ್ತೋರ್ವ ಬಾಲಕಿ ಸರಿತಾ ಕುಮಾರಿ ಕೆರೆಗೆ ಇಳಿದಿದ್ದಾಳೆ. ಆಕೆ ಕೂಡ ಮುಳಗಲು ಶುರು ಮಾಡಿರುವ ಕಾರಣ ಇತರ ಬಾಲಕಿಯರಾದ ಕೌಶಲ್ಯ, ಸೀಮಾ, ಶೋಭಾ ರಕ್ಷಣೆ ಮಾಡಲು ಕೆರೆಗೆ ಇಳಿದಿದ್ದಾರೆ. ಈ ವೇಳೆ ಒಬ್ಬರನ್ನೊಬ್ಬರ ಪ್ರಾಣ ರಕ್ಷಣೆ ಮಾಡಲು ಹೋಗಿ ಎಲ್ಲರೂ ಮೃತಪಟ್ಟಿದ್ದಾರೆ.
ಎಲ್ಲ ಹುಡುಗಿಯರು ಮುಳುಗಿರುವ ದೃಶ್ಯ ನೋಡಿರುವ ಕೆಲ ಮಕ್ಕಳು ಕೂಗುತ್ತಾ ಗ್ರಾಮದ ಕಡೆಗೆ ಓಡಿ ಹೋಗಿದ್ದಾರೆ. ಜನರು ಅಲ್ಲಿಗೆ ಬಂದು ನೋಡುವಷ್ಟರಲ್ಲಿ ಎಲ್ಲ ಹುಡುಗಿಯರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಎಲ್ಲರ ಮೃತದೇಹ ಹೊರತೆಗೆದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ ಎಲ್ಲರ ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.