ಜೋಧಪುರ(ರಾಜಸ್ಥಾನ): ಜಿಲ್ಲೆಯ ಭುಗ್ರಾ ಗ್ರಾಮದಲ್ಲಿ ಗುರುವಾರ ತಡರಾತ್ರಿ ಮದುವೆ ಮನೆಯೊಂದರಲ್ಲಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮೂವರು ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ನಾಗಪುರ ಸಂಸದ ಹನುಮಾನ್ ಬೆನಿವಾಲ್ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಗ್ರಾಮದ ಸಗತ್ ಸಿಂಗ್ ಎಂಬವರ ಮಗ ಸುರೇಂದ್ರ ಸಿಂಗ್ ಅವರ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ, ಗ್ಯಾಸ್ ಸಿಲಿಂಡರ್ ಸ್ಫೋಟವಾಗಿದೆ. ಗಾಯಾಳುಗಳಿಗೆ ಜೋಧಪುರದ ಮಹಾತ್ಮ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 10ಕ್ಕೂ ಹೆಚ್ಚು ಮಂದಿ ಸ್ಥಿತಿ ಚಿಂತಾಜನಕವಾಗಿದೆ. 47 ಮಂದಿ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮದುವೆ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಒಂದು ಸಿಲಿಂಡರ್ನಿಂದ ಗ್ಯಾಸ್ ಸೋರಿಕೆಯಾಗುತ್ತಿತ್ತು. ಈ ಬಗ್ಗೆ ಯಾರೂ ಗಮನ ಹರಿಸದ ಕಾರಣ ಈ ಅನಿಲ ಸೋರಿಕೆಯೇ ಅಪಘಾತಕ್ಕೆ ಕಾರಣ. ಮನೆ ತುಂಬಾ ಗ್ಯಾಸ್ ಹರಡಿತ್ತು, ಏಕಾಏಕಿ ಸಿಲಿಂಡರ್ ಸ್ಫೋಟಗೊಂಡು ವರನ ಸುತ್ತ ನಿಂತಿದ್ದ ಮಹಿಳೆಯರ ಮೇಲೆ ಬಿದ್ದಿದೆ. ಇದರಿಂದ ಅಲ್ಲಿದ್ದ ಎಲ್ಲರ ಬಟ್ಟೆಗೂ ಬೆಂಕಿ ಹೊತ್ತಿಕೊಂಡಿದೆ. ಅವಘಡದಲ್ಲಿ 29 ಮಹಿಳೆಯ, 10 ಮಕ್ಕಳು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಅಪಘಾತದಲ್ಲಿ ಧನಸಿಂಗ್ ಪತ್ನಿ ಚಂದ್ರ ಕನ್ವರ್ (40), ಭನ್ವರ್ ಸಿಂಗ್ ಪತ್ನಿ ಧಾಪು ಕನ್ವರ್ (50), ಮದನ್ ಸಿಂಗ್ ಪತ್ನಿ ಕವರು ಕನ್ವರ್ (45), ಸಂಗ್ ಸಿಂಗ್ ಮಗ ರತನ್ ಸಿಂಗ್(2) ಮತ್ತು ಗಣಪತ್ ಸಿಂಗ್ ಪುತ್ರಿ ಖುಷ್ಬು ಕವಾರ್(4) ಸಾವನ್ನಪ್ಪಿದವರು.
ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಹನುಮಾನ್ ಬೆನಿವಾಲ್ ಮಾಧ್ಯಮದ ಜೊತೆ ಮಾತನಾಡಿ, ಗಾಯಗೊಂಡವರ ಸ್ಥಿತಿ ತುಂಬಾ ಗಂಭೀರವಾಗಿದೆ. ಪ್ರಾಣಹಾನಿ ಮತ್ತಷ್ಟು ಹೆಚ್ಚಾಗಬಹುದು. ಮೃತರಿಗೆ ಮುಖ್ಯಮಂತ್ರಿ 25 ರಿಂದ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಶೇ.40ಕ್ಕಿಂತ ಕಡಿಮೆ ಸುಟ್ಟ ಗಾಯಗಳಾದವರ ಚಿಕಿತ್ಸೆಗೂ ಸೂಕ್ತ ವ್ಯವಸ್ಥೆ ಮಾಡಬೇಕು. ಕೇಂದ್ರ ಸರ್ಕಾರದಿಂದಲೂ ನೆರವು ನೀಡುವಂತೆ ಇಂದು ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಮುಂಬೈ ಫ್ಯಾಶನ್ ಸ್ಟ್ರೀಟ್‌ನ ಅಂಗಡಿಗಳಿಗೆ ಬೆಂಕಿ: ಪ್ರಾಣಾಪಾಯದಿಂದ ಪಾರು