ಭೋಪಾಲ್ (ಮಧ್ಯಪ್ರದೇಶ): ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಲ್ಲ, ಲಸಿಕೆಯೂ ಸಾಕಷ್ಟು ಪ್ರಮಾಣದಲ್ಲಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿರುವ ಮಧ್ಯೆಯೇ ಭೋಪಾಲ್ನಲ್ಲಿ ಆಮ್ಲಜನಕ, ರೆಮಿಡಿಸಿವರ್ ಔಷಧ ಕೊರತೆಯಿಂದ ವಕೀಲೆ ಸೇರಿದಂತೆ ಆರು ಜನ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ.
ಭೋಪಾಲ್ನ ಪೀಪಲ್ಸ್ ಆಸ್ಪತ್ರೆಯಲ್ಲಿ ಇದ್ದಕ್ಕಿದ್ದಂತೆ ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಕೊರತೆಯುಂಟಾಗಿದೆ. ಈ ವೇಳೆ ಆಮ್ಲಜನಕ ಪೂರೈಸುವಂತೆ ರೋಗಿಗಳ ಸಂಬಂಧಿಕರು ಕೇಳಿಕೊಂಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಆಮ್ಲಜನಕದ ವ್ಯವಸ್ಥೆ ಮಾಡುವಷ್ಟರಲ್ಲಿ ಐವರು ಸೋಂಕಿತರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಉತ್ತರಪ್ರದೇಶ ಇಕ್ಕಟ್ಟಿಗೆ ದೂಡಿದ ಕೊರೊನಾ:ಆಕ್ಸಿಜನ್ ಪೂರೈಸಲು ಯೋಗಿ ಸರ್ಕಾರದ ಹರಸಾಹಸ
ಆದರೆ, ಆಮ್ಲಜನಕದ ಕೊರತೆಯಿಂದ ರೋಗಿಗಳು ಮೃತಪಟ್ಟಿರುವುದನ್ನು ಪೀಪಲ್ಸ್ ಆಸ್ಪತ್ರೆ ತಳ್ಳಿ ಹಾಕಿದೆ. ಈ ಕುರಿತು ಆಸ್ಪತ್ರೆಯ ಡೀನ್ ಡಾ. ಅನಿಲ್ ದೀಕ್ಷಿತ್ ಲಿಖಿತ ಮಾಹಿತಿ ನೀಡಿದ್ದು, ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಆಮ್ಲಜನಕದ ಕೊರತೆ ಉಂಟಾಗಿತ್ತು. ಆದರೆ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲಾಗಿದೆ ಎಂದು ತಿಳಿಸಿದ್ದಾರೆ. ಆಮ್ಲಜನಕದ ಕೊರತೆಯಿಂದ ಐವರು ಮೃತಪಟ್ಟಿದ್ದಾರೆ ಎಂಬುವುದನ್ನು ಒಪ್ಪಿಕೊಳ್ಳಲು ಅವರು ನಿರಾಕರಿಸಿದ್ದಾರೆ.
ರೆಮ್ಡೆಸ್ವಿರ್ ಸಿಗದೆ ವಕೀಲೆ ಸಾವು:
ನಗರದ ಇನ್ನೊಂದು ಆಸ್ಪತ್ರೆಯಲ್ಲಿ ರೆಮಿಡಿಸಿವರ್ ಚುಚ್ಚುಮದ್ದು ಸಿಗದೆ ಕೋವಿಡ್ ಸೋಂಕಿತ ವಕೀಲೆ ಮೃತಪಟ್ಟಿದ್ದಾರೆ. ತನ್ನ ಸಹೋದರಿಗೆ ಈ ಔಷಧ ಒದಗಿಸಿಕೊಡುವಂತೆ ಮೃತಳ ತಂಗಿ ಆಸ್ಪತ್ರೆ ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳನ್ನು ಕೋರಿದ್ದರು. ಆದರೆ, ಮೂರು ದಿನಗಳ ಕಾಲ ಅಲೆದಾಡಿದರೂ ಅವರಿಗೆ ರೆಮಿಡಿಸಿವರ್ ಲಭ್ಯವಾಗಿರಲಿಲ್ಲ. ಕೊನೆಗೆ ಸೋಂಕಿತೆ ಮೃತಪಟ್ಟಿದ್ದಾರೆ.