ಚೆನ್ನೈ, ತಮಿಳುನಾಡು : ಕೂನೂರು ವಾಯುಪಡೆ ಹೆಲಿಕಾಪ್ಟರ್ ದುರಂತದ ವೇಳೆ ರಕ್ಷಣಾ ಕಾರ್ಯವನ್ನು ಅಲ್ಲಿನ ಅಗ್ನಿಶಾಮಕ ದಳ, ಸ್ಥಳೀಯರು ಕೈಗೊಂಡಿದ್ದರು. ಆ ಕಾರ್ಯಾಚರಣೆಯಲ್ಲಿ ಮೂವರನ್ನು ರಕ್ಷಿಸಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.
ಆದರೆ, ಕೂನೂರು ಅಗ್ನಿಶಾಮಕ ದಳದ ಕಚೇರಿಯಲ್ಲಿ ಮೂಲಸೌಕರ್ಯಗಳೇ ಇಲ್ಲ ಎಂದು ತಿಳಿದು ಬಂದಿದೆ. ಆಗಾಗ ಅಲ್ಲಿ ಸಂಭವಿಸುವ ಭೂಕುಸಿತ, ಪ್ರವಾಹದ ವೇಳೆ ನೆರವಿಗೆ ಧಾವಿಸುವ ಅಗ್ನಿಶಾಮಕ ದಳದಲ್ಲಿ ಇರಲೇಬೇಕಾದ ಮೂಲಸೌಲಭ್ಯಗಳಿಲ್ಲ ಎಂಬುದು ವಿಪರ್ಯಾಸ.
ಅಪಘಾತಗಳಂತೂ ಲೆಕ್ಕವಿಲ್ಲದಷ್ಟು ಬಾರಿ ನಡೆದಿವೆ. ಇಂತಹ ಪರಿಸ್ಥಿತಿಗಳಲ್ಲಿ ಜನರ ನೆರವಿಗೆ ಈ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದಾರೆ. ವಾಯುಪಡೆ ಹೆಲಿಕಾಪ್ಟರ್ ದುರಂತ ಪ್ರಕರಣದಲ್ಲಿ ತಮ್ಮ ಸೇವೆಗಾಗಿ ಭಾರತೀಯ ಸೇನೆ ಮತ್ತು ವಾಯು ಸೇನೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದರೂ, ಇಲ್ಲಿ ಎಲ್ಲವೂ ಸರಿಯಿಲ್ಲ ಎಂದು ಗೊತ್ತಾಗಿದೆ.
ಸುಮಾರು 40 ವರ್ಷಗಳಿಂದ ಅಗ್ನಿಶಾಮಕ ಕಚೇರಿ ಇದೆ. ಮಳೆಗಾಲದಲ್ಲಿ ಈ ಕೊಠಡಿಗಳು ಸೋರುತ್ತವೆ. ಶೌಚಾಲಯಗಳಲ್ಲಿ ಸ್ವಚ್ಛತೆ ಇಲ್ಲದಿರುವ ಕಾರಣದಿಂದ, ಇವುಗಳನ್ನು ಬಳಸುವುದೂ ಅಲ್ಲಿನ ಸಿಬ್ಬಂದಿಗೆ ಕಷ್ಟವಾಗಿದೆ. ಇಂತಹ ವಾತಾವರಣದಲ್ಲೂ ಇಲ್ಲಿನ ಸಿಬ್ಬಂದಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಕೂನೂರು ದುರಂತದ ವೇಳೆ ಸಹಾಯ ಮಾಡಿದ ನಂಜಪ್ಪ ಗ್ರಾಮದ ಅಭಿವೃದ್ಧಿಗೆ ಭಾರತ ಸರ್ಕಾರ ಸುಮಾರು 2.5 ಕೋಟಿ ರೂಪಾಯಿ ಅನುದಾನವನ್ನು ನೀಡಿದೆ. ಆದರೆ, ಇಲ್ಲಿನ ಅಗ್ನಿಶಾಮಕ ದಳದಲ್ಲಿ ಮೂಲಸೌಕರ್ಯ ಕೊರತೆ ಇದ್ದು, ಅದಕ್ಕೂ ಅನುದಾನ ನೀಡಬೇಕೆಂದು ಹಲವು ಹೋರಾಟಗಾರರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಹೆತ್ತಮ್ಮನಿಗೆ ಬೇಡವಾದ ಕಂದಮ್ಮ.. ತನ್ನ ಮರಿಗಳ ಜೊತೆ ನವಜಾತ ಶಿಶು ರಕ್ಷಿಸಿತು ಶ್ವಾನ!