ಫಿರೋಜಾಬಾದ್: ಸಹಪಾಠಿಗಳು ಹೊಡೆದಿದ್ದರಿಂದ ಎರಡನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ. ಫಿರೋಜಾಬಾದ್ ಹತ್ತಿರದ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಪ್ರಕರಣದ ವಿವರ: 10 ವರ್ಷದ ಶಿವಂ ಹೆಸರಿನ ವಿದ್ಯಾರ್ಥಿ ಶಿಕೋಹಾಬಾದ್ ಠಾಣೆ ವ್ಯಾಪ್ತಿಯ ಕಿಶನಪುರ್ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ. ಬಾಲಕನ ತಂದೆ ಹೇಳುವ ಪ್ರಕಾರ- ಸೋಮಾವರ ಶಾಲೆಯಲ್ಲಿ ಯಾವುದೋ ವಿಷಯದಲ್ಲಿ ಸಹಪಾಠಿಗಳೊಂದಿಗೆ ಆತನ ಜಗಳವಾಗಿತ್ತು. ಆದರೆ, ಜಗಳ ಎಷ್ಟು ವಿಕೋಪಕ್ಕೆ ಹೋಗಿದೆ ಎಂದರೆ ಸಹಪಾಠಿಗಳು ಆತನನ್ನು ಸಿಕ್ಕಾಪಟ್ಟೆ ಥಳಿಸಿದ್ದಾರೆ. ಥಳಿತದಿಂದಾಗಿ ಸೋಮವಾರ ಸಂಜೆಯೇ ಆತನ ಆರೋಗ್ಯ ತೀರಾ ಹದಗೆಟ್ಟಿದೆ. ನಂತರ ಮಂಗಳವಾರ ಆಸ್ಪತ್ರೆಯಲ್ಲಿ ಆತ ನಿಧನನಾಗಿದ್ದಾನೆ.
ವಿದ್ಯಾರ್ಥಿಯ ಸಾವಿನಿಂದ ಆಕ್ರೋಶಗೊಂಡ ಸಂಬಂಧಿಕರು ಆತನ ಶವವನ್ನು ಶಾಲೆಯ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಯ ಸಾವಿಗೆ ಶಾಲಾ ಶಿಕ್ಷಕರೇ ಜವಾಬ್ದಾರಿ ಎಂದು ಪಾಲಕರು ಆರೋಪಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕೋಹಾಬಾದ್ ಠಾಣಾಧಿಕಾರಿ ಹರವೇಂದ್ರ ಮಿಶ್ರಾ ಹೇಳಿದ್ದಾರೆ. ಮೃತ ವಿದ್ಯಾರ್ಥಿಯ ತಂದೆ ಶಾಲೆಯ ಕೆಲ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ವೇಳೆ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಮಂಜು ಯಾದವ್, ಶಾಲೆಯಲ್ಲಿ ಯಾವುದೇ ಜಗಳ ನಡೆದಿಲ್ಲ ಎಂದಿದ್ದಾರೆ. ಶಾಲೆಯ ಹೊರಗೆ ನಡೆದಿದ್ದರೆ ಇದರ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: ಪೋಟೋ ಎಡಿಟ್ ಮಾಡಿ, ಅಶ್ಲೀಲವಾಗಿ ಚಿತ್ರಿಸಿ ಹಣಕ್ಕೆ ಬೇಡಿಕೆ: ವಿದ್ಯಾರ್ಥಿ ಸಾವಿಗೆ ಕಾರಣವಾದ ಲೋನ್ ಆ್ಯಪ್