ಧನ್‌ಬಾದ್ ( ಜಾರ್ಖಂಡ್): ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ಮಂಗಳವಾರ ವಸತಿ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ 14 ಜನರು ಸಜೀವ ದಹನವಾಗಿದ್ದಾರೆ. ಈ ಸಾವಿನ ಸಂಖ್ಯೆ ಹೆಚ್ಚಾಗುವ ಶಂಕೆ ಸಹ ವ್ಯಕ್ತವಾಗಿದೆ. ಈ ಅಪಾರ್ಟ್‌ಮೆಂಟ್‌ನಲ್ಲಿ ಸುಮಾರು 400 ಮಂದಿ ವಾಸವಿದ್ದರು ಎಂದು ತಿಳಿದು ಬಂದಿದೆ.
ಇಲ್ಲಿನ ಜೋಡಾ ಫಾಟಕ್ ಪ್ರದೇಶದಲ್ಲಿರುವ ಆಶೀರ್ವಾದ್ ಟವರ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘೋರ ದುರಂತ ಜರುಗಿದೆ. ಅಪಾರ್ಟ್‌ಮೆಂಟ್‌ನಲ್ಲಿ ಅನೇಕ ಜನರು ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸದ್ಯ ಮೃತ 14 ಜನರಲ್ಲಿ ನಾಲ್ವರು ಮಕ್ಕಳು ಮತ್ತು ಮಹಿಳೆಯರು ಸಹ ಸೇರಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಇದುವರೆಗೆ ನಡೆದ ಸಾವಿನ ಸಂಖ್ಯೆ ಬಗ್ಗೆ ಜಾರ್ಖಂಡ್ ಮುಖ್ಯ ಕಾರ್ಯದರ್ಶಿ ಸುಖದೇವ್ ಸಿಂಗ್ ಖಚಿತ ಪಡಿಸಿದ್ದಾರೆ.
ಬೆಂಕಿ ದುರಂತದ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ವಾಹನಗಳು ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿದ್ದಾರೆ. ಅಲ್ಲದೇ, ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಹಾಗೂ ಉನ್ನತ ಅಧಿಕಾರಿಗಳು, ಪ್ರಮುಖರು ಕೂಡ ಧಾವಿಸಿ, ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿದ್ದಾರೆ.
13 ಅಂತಸ್ತಿನ ಅಪಾರ್ಟ್‌ಮೆಂಟ್ - 100 ಫ್ಲ್ಯಾಟ್ಗಳು: ಈ ಅಗ್ನಿ ದುರಂತ ಉಂಟಾಗಿರುವ ಆಶೀರ್ವಾದ್ ಟವರ್ ಅಪಾರ್ಟ್‌ಮೆಂಟ್ 13 ಅಂತಸ್ತುಗಳನ್ನು ಹೊಂದಿದೆ. ಇದರಲ್ಲಿ ಒಟ್ಟಾರೆ 100 ಫ್ಲ್ಯಾಟ್ಗಳು ಇವೆ. ಮಕ್ಕಳು, ಹಿರಿಯರು ಸೇರಿದಂತೆ 400ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಧನ್‌ಬಾದ್ ಪಟ್ಟಣದಲ್ಲಿ ಈ ಪ್ರದೇಶದ ಅತಿದೊಡ್ಡ ಅಪಾರ್ಟ್‌ಮೆಂಟ್ ಎಂದೇ ಪರಿಗಣಿಸಲಾಗಿದೆ.
ಎರಡನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ: ಇಲ್ಲಿನ ಜನನಿಬಿಡ ಪ್ರದೇಶದ ಬ್ಯಾಂಕ್ ಮಾಡ್ ಪೊಲೀಸ್ ಠಾಣೆ ವ್ಯಾಪ್ತಿಯ ಶಕ್ತಿ ಮಂದಿರದ ಬಳಿ ಅಪಾರ್ಟ್‌ಮೆಂಟ್ ಇದೆ. ಇಂದು ಸಂಜೆ ಅಪಾರ್ಟ್‌ಮೆಂಟ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಮೊದಲಿಗೆ ಎರಡನೇ ಮಹಡಿಯಲ್ಲಿ ಹೊತ್ತಿಕೊಂಡಿದ್ದು, ಇದಾದ ಬಳಿಕ ಮೂರನೇ ಮಹಡಿಗೆ ಅಗ್ನಿ ವ್ಯಾಪಿಸಿಕೊಂಡಿದೆ. ನಂತರದಲ್ಲಿ ಕ್ಷಣಾರ್ಧದಲ್ಲೇ ಬೆಂಕಿಯು ಭಯ ಹುಟ್ಟಿಸುವ ರೂಪ ತಾಳಿಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಹತ್ತಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು ಸನ್ನದ್ಧ: ಈ ಅಗ್ನಿ ದುರಂತದಿಂದ ಸುತ್ತಮುತ್ತಲಿನ ಪ್ರದೇಶದಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಅಗ್ನಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಇದೇ ವೇಳೆ ಅಪಾರ್ಟ್‌ಮೆಂಟ್‌ನಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರಿಸುವ ಕಾರ್ಯವೂ ನಡೆಯುತ್ತಿದೆ. ಜೊತೆಗೆ ಬೆಂಕಿಯಲ್ಲಿ ಸುಟ್ಟು ಕರಕಲಾದ ಜನರನ್ನು ಹೊರತೆಗೆಯಲಾಗುತ್ತಿದೆ. ಸ್ಥಳದಲ್ಲಿ ಹತ್ತಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಅನಾಹುತಕ್ಕೆ ತಿಳಿಯದ ನಿಖರ ಕಾರಣ: ಈ ಬಗ್ಗೆ ಧನ್‌ಬಾದ್ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರತಿಕ್ರಿಯಿಸಿದ್ದು, ಬೆಂಕಿ ಅನಾಹುತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸದ್ಯ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ ಇದೇ ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಇಬ್ಬರು ಮಕ್ಕಳು ಸುಟ್ಟು ಕರಕಲಾದ ಘಟನೆ ನಡೆದಿತ್ತು.
ಇದನ್ನೂ ಓದಿ: ಫಾರ್ಮಾ ಕಂಪನಿಯಲ್ಲಿ ಭಾರೀ ಸ್ಫೋಟ: ಇಬ್ಬರು ಕಾರ್ಮಿಕರ ಸಾವು, ಮೂವರಿಗೆ ಗಂಭೀರ ಗಾಯ