ಭುವನೇಶ್ವರ್ (ಒಡಿಶಾ) : ಭುವನೇಶ್ವರ್-ಹೌರಾ ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ಬೆಳಗ್ಗೆ ಕಟಕ್ ನಿಲ್ದಾಣದಲ್ಲಿ ನಡೆದಿದೆ. ರೈಲಿನ ಒಂದು ಬೋಗಿಯ ಕೆಳಗಿದ್ದ ಚಕ್ರದ ಬಳಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳಲಾರಂಭಿಸಿದೆ. ಬಳಿಕ ಗಾಬರಿಗೊಂಡ ಪ್ರಯಾಣಿಕರು ಹಿರಿಯ ರೈಲ್ವೆ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ರೈಲ್ವೆ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭುವನೇಶ್ವರ-ಹೌರಾ ಜನಶತಾಬ್ದಿ ಎಕ್ಸ್‌ಪ್ರೆಸ್ ಕಟಕ್ ನಿಲ್ದಾಣದಲ್ಲಿ ನಿಂತ ನಂತರವೇ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬೆಂಕಿಯನ್ನು ಹತೋಟಿಗೆ ತರಲಾಗಿದ್ದು, ಭಾರಿ ದುರಂತವೊಂದು ತಪ್ಪಿದೆ.
ರೈಲ್ವೆ ಅಧಿಕೃತ ಮೂಲಗಳ ಪ್ರಕಾರ, ಜನಶತಾಬ್ದಿ ಎಕ್ಸ್‌ಪ್ರೆಸ್ ಇಂದು ಬೆಳಗ್ಗೆ 7 ಗಂಟೆಗೆ ಕಟಕ್ ನಿಲ್ದಾಣವನ್ನು ತಲುಪಿದ್ದು, ಆ ಸಮಯದಲ್ಲಿ ಹಲವಾರು ಪ್ರಯಾಣಿಕರು ಕೋಚ್ ಅಡಿಯಲ್ಲಿನ ರೈಲಿನ ಚಕ್ರಗಳ ಬಳಿ ಬೆಂಕಿಯನ್ನು ಗಮನಿಸಿದ್ದಾರೆ. ಬಳಿಕ, ಸಮಯ ವ್ಯರ್ಥ ಮಾಡದೇ ಅಗ್ನಿಶಾಮಕ ದಳ ಹಾಗೂ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. 45 ನಿಮಿಷಗಳಲ್ಲಿ ಪರಿಸ್ಥಿತಿ ಹತೋಟಿಗೆ ತರಲಾಯಿತು. ರೈಲು ಭುವನೇಶ್ವರದಿಂದ ಹೌರಾಕ್ಕೆ ಹೋಗುತ್ತಿತ್ತು, ಯಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಹತೋಟಿಗೆ ಬಂದ ನಂತರ ಜನಶತಾಬ್ದಿ ಎಕ್ಸ್‌ಪ್ರೆಸ್ ಗಮ್ಯಸ್ಥಾನದ ಕಡೆಗೆ ಪ್ರಯಾಣ ಬೆಳೆಸಿತು ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಕೋಣಕ್ಕೆ ಡಿಕ್ಕಿ ಹೊಡೆದು ಹಳಿ ತಪ್ಪಿದ ಪ್ಯಾಸೆಂಜರ್ ರೈಲು : ಪ್ರಯಾಣಿಕರು ಬಚಾವ್
ಕಳೆದ ಜೂನ್‌ನಲ್ಲಿ ಸಿಕಂದರಾಬಾದ್ - ಅಗರ್ತಲಾ ಎಕ್ಸ್‌ಪ್ರೆಸ್‌ನಲ್ಲಿ ಬ್ರಹ್ಮಪುರ ರೈಲು ನಿಲ್ದಾಣದ ಬಳಿ ಬೆಂಕಿ ಕಾಣಿಸಿಕೊಂಡಿತ್ತು. ರೈಲಿನ ಬಿ5 ಕಂಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತನಿಖೆಯ ನಂತರ ಶಾರ್ಟ್ ಸರ್ಕ್ಯೂಟ್ ನಿಂದ ರೈಲಿನ ಬೋಗಿಯಲ್ಲಿ ಬೆಂಕಿ ಹೊತ್ತಿಕೊಂಡಿರುವುದು ತಿಳಿದು ಬಂದಿತ್ತು. ಬ್ರಹ್ಮಪುರ ನಿಲ್ದಾಣದಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ರೈಲಿನಿಂದ ಕೆಳಗೆ ಇಳಿದಿದ್ದರು.
ರಾಜ್ಯದಲ್ಲಿ ರೈಲ್ವೆ ಅಪಘಾತ ಸುದ್ದಿಗಳು ನಿರಂತರವಾಗಿ ಕೇಳಿ ಬರುತ್ತಿದೆ. ಕೋರಮಂಡಲ್ ಎಕ್ಸ್ ಪ್ರೆಸ್ ಅಪಘಾತದ ಕಹಿ ನೆನೆಪು ಮಾಸುವ ಮುನ್ನವೇ ಪದೇ ಪದೇ ರೈಲು ಅಪಘಾತಗಳ ಸುದ್ದಿ ಮುನ್ನೆಲೆಗೆ ಬರುತ್ತಿದೆ. ಕೆಲವೊಮ್ಮೆ ರೈಲು ಹಳಿತಪ್ಪಿದರೆ, ಇನ್ನು ಕೆಲವೊಮ್ಮೆ ಬೆಂಕಿ ಹೊತ್ತಿಕೊಂಡ ಘಟನೆ ವರದಿಯಾಗುತ್ತಿದೆ.
ಇದನ್ನೂ ಓದಿ : ರೈಲು ನಿಲ್ದಾಣದಲ್ಲಿ ವಿದ್ಯುತ್ ಕಂಬ ಏರಿದ ಮಾನಸಿಕ ಅಸ್ವಸ್ಥ : ರೈಲ್ವೆ ಸಿಬ್ಬಂದಿ ಮಾಡಿದ್ದೇನು?