ಗಯಾ(ಬಿಹಾರ) : ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲೆಂದು ಐಸೋಲೇಷನ್ ವಾರ್ಡ್ ಆಗಿ ಪರಿವರ್ತಿಸಿದ್ದ ರೈಲ್ವೆ ಬೋಗಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಬೋಗಿ ಸುಟ್ಟು ಕರಕಲಾದ ಘಟನೆ ಬಿಹಾರದ ಗಯಾ ರೈಲು ನಿಲ್ದಾಣದಲ್ಲಿ ನಡೆದಿದೆ.
ಗಯಾ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಈ ರೈಲು ಬೋಗಿಯಲ್ಲಿ ಬೆಂಕಿ ಹೊತ್ತಿಕೊಂಡು ಹೊಗೆ ಆವರಿಸಿಕೊಂಡಿದ್ದನ್ನು ವ್ಯಕ್ತಿಯೊಬ್ಬರು ಗಮನಿಸಿ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ತಕ್ಷಣವೇ ಕಾರ್ಯಾಚರಣೆಗಿಳಿದ ಅಧಿಕಾರಿಗಳು, ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಪಟ್ಟಿದ್ದಾರೆ.
ಇದೇ ವೇಳೆ ಬೇರೆ ಬೋಗಿಗಳಿಗೆ ಬೆಂಕಿ ವ್ಯಾಪಿಸದಿರಲು ಬೆಂಕಿ ಹೊತ್ತಿಕೊಂಡ ಬೋಗಿಯಿಂದ ಪ್ರತ್ಯೇಕಿಸಲಾಗಿದೆ. ಅಗ್ನಿಶಾಮಕ ದಳ, ಸ್ಥಳೀಯರು ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ಕೊನೆಗೂ ತಹಬದಿಗೆ ತರಲಾಗಿದೆ. ಬೆಂಕಿಯ ತೀವ್ರತೆ ಹೆಚ್ಚಿದ್ದ ಕಾರಣ ರೈಲು ಬೋಗಿ ಸಂಪೂರ್ಣ ಸುಟ್ಟು ಹೋಗಿದೆ. ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 15-18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ; 2022ರ ಜ.1ರಿಂದ ನೋಂದಣಿ ಆರಂಭ
ಕೋವಿಡ್ ಸೋಂಕಿತರಿಗಾಗಿ ರೂಪಿಸಿದ್ದ 'ಬೋಗಿ ವಾರ್ಡ್' ಬೆಂಕಿಗೆ ಸುಟ್ಟು ಹೋಗಿದ್ದರಿಂದ ಉಪಕರಣಗಳೂ ನಾಶವಾಗಿವೆ. ಬೋಗಿಗೆ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬ ಮಾಹಿತಿ ಲಭ್ಯವಾಗಿಲ್ಲ. ಯಾರೋ ಕಿಡಿಗೇಡಿಗಳು ಈ ಕೃತ್ಯ ಮಾಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.