ರೇವಾರಿ (ಹರಿಯಾಣ): ಮಹಿಳಾ ಪ್ರಯಾಣಿಕರೊಬ್ಬರಿಗೆ ಶೌಚಾಲಯದ ಕೀಲಿ ನೀಡಲು ನಿರಾಕರಿಸಿದ ಹಾಗೂ ಅವರೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಹರಿಯಾಣದ ರೇವಾರಿ ರೈಲ್ವೆ ನಿಲ್ದಾಣದ ಇಬ್ಬರು ಸ್ಟೇಷನ್ ಮಾಸ್ಟರ್‌ಗಳ ವಿರುದ್ಧ ರೈಲ್ವೆ ಪೊಲೀಸರು ವಿವಿಧ ಸೆಕ್ಷನ್‌ಗಳಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸೋಮವಾರ ಸಂಜೆ ದೆಹಲಿಯ ಪಶ್ಚಿಮ ವಿಹಾರದ ಮಹಿಳಾ ಪ್ರಯಾಣಿಕರೊಬ್ಬರು ರೇವಾರಿ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಾ ವೈಟಿಂಗ್ ರೂಮ್ನಲ್ಲಿ ಕುಳಿತಿದ್ದರು. ಈ ವೇಳೆ, ಆಕೆಯ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಶೌಚಾಲಯಕ್ಕೆ ಹೋಗಲು ಬಯಸಿದ್ದರು. ವೇಟಿಂಗ್ ರೂಮಿನ ಶೌಚಾಲಯಕ್ಕೆ ಹೋದಾಗ ಬೀಗ ಹಾಕಲಾಗಿತ್ತು ಎನ್ನಲಾಗಿದೆ.
ಶೌಚಾಲಯಕ್ಕೆ ಬೀಗ ಹಾಕಿದ್ದ ಪರಿಣಾಮ ನಾನು ಸ್ಟೇಷನ್ ಮಾಸ್ಟರ್ ವಿನಯ್ ಶರ್ಮಾ ಬಳಿ ಹೋಗಿ ಶೌಚಾಲಯದ ಕೀಲಿ ಕೇಳಿದೆ. ಆಗ ವಿನಯ್ ಶರ್ಮಾ ಮತ್ತು ಪಕ್ಕದಲ್ಲಿ ಕುಳಿತಿದ್ದ ಇನ್ನೋರ್ವ ಸ್ಟೇಷನ್ ಮಾಸ್ಟರ್ ರಾಮ್ ಅವತಾರ್ ಮಹಿಳೆಯರು ಶೌಚಾಲಯವನ್ನು ಕೊಳಕು ಮಾಡುತ್ತಾರೆ ಎಂದು ಕೀಲಿ ನೀಡಲು ನಿರಾಕರಿಸಿದರು ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಅಲ್ಲದೇ, ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕಲು ಸಾಧ್ಯವಿಲ್ಲ ಎಂದು ಕೇಳಿದಾಗ ಇಬ್ಬರೂ ಸ್ಟೇಷನ್ ಮಾಸ್ಟರ್‌ಗಳು ಅನುಚಿತ ಮತ್ತು ಅಸಭ್ಯವಾಗಿ ವರ್ತಿಸಿದರು ಎಂದೂ ತನ್ನ ದೂರಿನಲ್ಲಿ ಮಹಿಳೆ ಹೇಳಿದ್ದು, ಈ ದೂರಿನನ್ವಯ ಪೊಲೀಸರು ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಶೀಘ್ರದಲ್ಲೇ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: 'ಅತ್ತೆಯ ಸೇವಕನಾದ ಪತಿ': ನಿರಂತರ ಕಿರುಕುಳಕ್ಕೆ ನೊಂದು ವಿಡಿಯೋ ಮಾಡಿ ಸಾವಿಗೆ ಶರಣಾದ ಸೊಸೆ