ಅರ್ರಾ(ಬಿಹಾರ) : ಅರೆ ಬೆತ್ತಲಾಗಿ ರೈಲಿನಲ್ಲಿ ಓಡಾಡುತ್ತಿದ್ದ ಬಿಹಾರದ ಭೋಜ್‌ಪುರದ ಜೆಡಿಯು ಶಾಸಕ ಗೋಪಾಲ್ ಮಂಡಲ್ ವಿರುದ್ಧ ಜಿಆರ್‌ಪಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ರಾಜೇಂದ್ರ ನಗರದಿಂದ ನವದೆಹಲಿಗೆ ಹೋಗುವ ವೇಳೆ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಶಾಸಕರು, ಒಳ ಉಡುಪನ್ನು ಮಾತ್ರ ಧರಿಸಿ ತಿರುಗಾಡುತ್ತಿದ್ದರು. ಈ ಸಮಯದಲ್ಲಿ ಅವರು ಸಹ ಪ್ರಯಾಣಿಕರನ್ನು ನಿಂದಿಸಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಈ ಹಿನ್ನೆಲೆ ಜೆಡಿಯು ಎಂಎಲ್‌ಎ ಸೇರಿದಂತೆ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಬರ್ಮನ್ ಸೂಚನೆ ಮೇರೆಗೆ ಶಾಸಕ ಗೋಪಾಲ್ ಮಂಡಲ್, ಕುನಾಲ್ ಸಿಂಗ್, ದಿಲೀಪ್ ಕುಮಾರ್ ಹಾಗೂ ವಿಜಯ್ ಮಂಡಲ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ರೈಲಿನೊಳಗೆ ಒಳ ಉಡುಪುಗಳಲ್ಲಿ ಸಂಚರಿಸುತ್ತಿದ್ದ ಚಿತ್ರಗಳು ವೈರಲ್ ಆದ ನಂತರ ಶಾಸಕ ಮಂಡಲ್, ದೇಶದ ಗಮನ ಸೆಳೆದಿದ್ದರು. ಅಷ್ಟೇ ಅಲ್ಲ, ಚಲಿಸುತ್ತಿದ್ದ ರೈಲಿನಲ್ಲಿ ತಮ್ಮ ಕಾರ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿದವರನ್ನೂ ಶಾಸಕರು ನಿಂದಿಸಿದ್ದರು.
ಹೆಚ್ಚಿನ ಓದಿಗೆ : ಒಳ ಉಡುಪಿನಲ್ಲೇ ರೈಲಿನೊಳಗೆ ತಿರುಗುತ್ತಿರುವ ಜೆಡಿಯು ಶಾಸಕ : ಫೋಟೋ ವೈರಲ್
ಜೆಹನಾಬಾದ್ ನಿವಾಸಿಯಾದ ಪ್ರಹ್ಲಾದ್ ಪಾಸ್ವಾನ್ ಎಂಬುವರು ತಮ್ಮ ಕುಟುಂಬದೊಂದಿಗೆ ಪಾಟ್ನಾ ಜಂಕ್ಷನ್‌ನಿಂದ ನವದೆಹಲಿಗೆ ಒಂದೇ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ಆ ವೇಳೆ ಮಹಿಳಾ ಪ್ರಯಾಣಿಕರ ಸಮ್ಮುಖದಲ್ಲೇ ಶಾಸಕರು ಒಳ ಉಡುಪಿನಲ್ಲಿ ನಡೆಯುತ್ತಿರುವುದನ್ನು ತೀವ್ರವಾಗಿ ಅವರು ವಿರೋಧಿಸಿದ್ದರು. ಆದರೆ, ಶಾಸಕರು ತಮ್ಮ ದರ್ಪ ಪ್ರದರ್ಶನ ಮಾಡಿದ್ದರು ಎನ್ನಲಾಗಿದೆ.
ಇವರ ಈ ಗಲಾಟೆ ತಡೆಯಲು ಆರ್‌ಪಿಎಫ್ ಸಿಬ್ಬಂದಿ ಮಧ್ಯಪ್ರವೇಶಿಸಬೇಕಾಗಿತ್ತು. ಘಟನೆಯ ಬಗ್ಗೆ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದ ಎಂಎಲ್‌ಎ, ತನ್ನ ಹೊಟ್ಟೆಯು ಸರಿ ಇರಲಿಲ್ಲ. ಆದ್ದರಿಂದ ನಾನು ಆ ರೀತಿಯಾಗಿ ಒಳ ಉಡುಪಿನಲ್ಲೇ ಓಡಾಡಬೇಕಾಯಿತು ಎಂದಿದ್ದಾರೆ.