ಗುವಾಹಟಿ (ಅಸ್ಸೋಂ): ಅಸ್ಸೋಂದ ದರ್ರಾಂಗ್ ಜಿಲ್ಲೆಯಲ್ಲಿ ಪೊಲೀಸ್ ಅನುಮತಿಯಿಲ್ಲದೆ ಬಜರಂಗ ದಳದಿಂದ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿರುವ ವಿಷಯ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಬಜರಂಗ ದಳದ ಕ್ರಮದ ಬಗ್ಗೆ ಹಲವು ಪ್ರತಿಪಕ್ಷಗಳ ನಾಯಕರು ಅತೃಪ್ತಿ ವ್ಯಕ್ತಪಡಿಸಿದ್ದು, ಅಸ್ಸೋಂ ಪೊಲೀಸರ ಪಾತ್ರವನ್ನು ಟೀಕಿಸಿದ್ದಾರೆ. ಈ ಘಟನೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಪೊಲೀಸ್ ಮಹಾನಿರ್ದೇಶಕ ಜಿಪಿ ಸಿಂಗ್ ತನಿಖೆಗೆ ಆದೇಶಿಸಿದ್ದಾರೆ.
ದರ್ರಾಂಗ್ ಜಿಲ್ಲೆಯ ಮಂಗಲ್ದೋಯಿಯಲ್ಲಿರುವ ಮಹರ್ಷಿ ವಿದ್ಯಾ ಮಂದಿರದಲ್ಲಿ ಬಜರಂಗ ದಳವು ಶಸ್ತ್ರಾಸ್ತ್ರ ತರಬೇತಿ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಇದು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಯನ್ನು ಉಂಟು ಹಾಕಿದೆ. ಮಹರ್ಷಿ ವಿದ್ಯಾಮಂದಿರದ ಅಧಿಕಾರಿಗಳ ಮಾಹಿತಿ ಪ್ರಕಾರ, ಬಜರಂಗ ದಳವು ಅರ್ಜಿಯ ಮೂಲಕ ಶಾಲೆಯನ್ನು ಬಳಸಲು ಅನುಮತಿ ಪಡೆದಿದೆ. ಈ ಪತ್ರದಲ್ಲಿ ಯೋಗ ತರಬೇತಿಯನ್ನು ನೀಡುವ ಬಗ್ಗೆ ಮಾತ್ರ ಉಲ್ಲೇಖಿಸಲಾಗಿದೆ. ಆದರೆ, ಯೋಗ ತರಬೇತಿಯ ಬದಲು ಶಸ್ತ್ರಾಸ್ತ್ರ ತರಬೇತಿ ನೀಡುವ ಮೂಲಕ ಬಜರಂಗ ದಳ ವಿವಾದಕ್ಕೆ ಸಿಲುಕಿದೆ.
ಇಂತಹ ತರಬೇತಿ ಅಗತ್ಯ ಎಂದ ಸಚಿವ: ಬಜರಂಗ ದಳದ ಶಸ್ತ್ರಾಸ್ತ್ರ ತರಬೇತಿ ಕುರಿತು ಬಿಜೆಪಿ ನಾಯಕ ಮತ್ತು ಅಸ್ಸೋಂ ಸಚಿವ ಜಯಂತ ಮಲ್ಲ ಬರುವಾ ಪ್ರತಿಕ್ರಿಯಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇಂತಹ ತರಬೇತಿಯು ರಾಷ್ಟ್ರ ಮತ್ತು ಆತ್ಮರಕ್ಷಣೆಗಾಗಿ ಅಗತ್ಯವಿರುವ ವಿಶ್ವಾಸವನ್ನು ತುಂಬುತ್ತದೆ. ಮಠ, ಮಂದಿರಗಳ ರಕ್ಷಣೆಗೆ ಇಂತಹ ವ್ಯವಸ್ಥೆ ಬೇಕು. ಸ್ವಯಂ ರಕ್ಷತೆಗಾಗಿ ಇಂತಹ ತರಬೇತಿ ಅಗತ್ಯ. ಇದು ಸನಾತನ ಸಂಸ್ಕೃತಿಯ ವಿಷಯವಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಮಂಗಲ್ದೋಯಿ ತರಬೇತಿಯ ಫೋಟೋಗಳು ಮತ್ತು ವಿಡಿಯೋಗಳ ಬಗ್ಗೆ ಸಚಿವರು ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಟೀಕೆ: ಅಸ್ಸೋಂ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮೀರಾ ಬೋರ್ತಕೂರ್ ಬಜರಂಗ ದಳದ ಶಸ್ತ್ರಾಸ್ತ್ರ ತರಬೇತಿಯನ್ನು ಕರಾಳ ಭವಿಷ್ಯದ ಸೂಚನೆ ಎಂದು ಟೀಕಿಸಿದ್ದಾರೆ. ಬಜರಂಗ ದಳವು ದರ್ರಾಂಗ್ ಜಿಲ್ಲೆಯ ಮಂಗಲ್ಡೋಯಿ ಶಾಲೆಯಲ್ಲಿ ಶಸ್ತ್ರಾಸ್ತ್ರಗಳ ತರಬೇತಿ ನೀಡಿದೆ. ಈ ಬಗ್ಗೆ ನಾವು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಪ್ರಶ್ನಿಸಿದಾಗ ಇದಕ್ಕೆ ಎಸ್ಪಿ ಯಾವುದೇ ಅನುಮತಿಯನ್ನು ನೀಡಿಲ್ಲ ಎಂಬುದಾಗಿ ಮಾಹಿತಿ ನೀಡಿದ್ದಾರೆ ಎಂದು ಮೀರಾ ತಿಳಿಸಿದ್ದಾರೆ. ಅಲ್ಲದೇ, 2024ರ ಚುನಾವಣೆ ಮುಂದೆ ಬರಲಿದೆ. ಪೊಲೀಸರ ಅನುಮತಿಯಿಲ್ಲದೆ ನೀವು ಶಸ್ತ್ರಾಸ್ತ್ರಗಳೊಂದಿಗೆ ತರಬೇತಿ ನೀಡುವುದು ಅಥವಾ ಬ್ಯಾನರ್‌ಗಳೊಂದಿಗೆ ರಸ್ತೆಯಲ್ಲಿ ಮೆರವಣಿಗೆ ನಡೆಸುವುದು ಹೇಗೆ? ಇದು ಯಾವ ರೀತಿಯ ಸೂಚನೆ ಕೊಡುತ್ತದೆ ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ, ರೈಜೋರ್ ದಳದ ಅಧ್ಯಕ್ಷ ಮತ್ತು ಶಿವಸಾಗರ ಕ್ಷೇತ್ರದ ಶಾಸಕ ಅಖಿಲ್ ಗೊಗೊಯ್, ಬಜರಂಗ ದಳದ ಶಸ್ತ್ರಾಸ್ತ್ರ ತರಬೇತಿಯನ್ನು ಸರ್ಕಾರಿ ಪ್ರಾಯೋಜಿತ ಹಿಂದೂ ಮೂಲಭೂತವಾದ ಎಂದು ದೂರಿದ್ದಾರೆ. ಮಹರ್ಷಿ ವಿದ್ಯಾ ಮಂದಿರದಲ್ಲಿ ಬಜರಂಗದಳದ ಶಸ್ತ್ರಾಸ್ತ್ರ ತರಬೇತಿಯು ಅಸ್ಸೋಂನಲ್ಲಿ ಮಣಿಪುರದಂತಹ ಭಯಾನಕ ಪರಿಸ್ಥಿತಿಯನ್ನು ಸೃಷ್ಟಿಸುವುದಾಗಿದೆ. ಪೊಲೀಸ್ ವರಿಷ್ಠಾಧಿಕಾರಿಯ ಬೆಂಬಲದೊಂದಿಗೆ ಇಂತಹ ಬಂದೂಕು ತರಬೇತಿಯನ್ನು ನಡೆಸಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.
ತನಿಖೆಗೆ ಡಿಜಿಪಿ ಆದೇಶ: ವಿದ್ಯಾ ಮಂದಿರದಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿರುವ ವಿಷಯ ವಿವಾದಕ್ಕೆ ಕಾರಣವಾದ ನಂತರ ಅಸ್ಸೋಂ ಪೊಲೀಸ್ ಮಹಾನಿರ್ದೇಶಕ ಜಿಪಿ ಸಿಂಗ್ ತನಿಖೆಗೆ ಆದೇಶಿಸಿದ್ದಾರೆ. ಈ ಘಟನೆಯ ಕುರಿತು ಅಗತ್ಯ ಕಾನೂನು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ದರ್ರಾಂಗ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸದ್ಯ ಅನುಮತಿಯಿಲ್ಲದೆ ಶಸ್ತ್ರಾಸ್ತ್ರ ತರಬೇತಿ ನೀಡಿದ ಆರೋಪದ ಮೇಲೆ ಬಜರಂಗದಳ ವಿರುದ್ಧ ದರಾಂಗ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಮಂಗಲ್ಡೊಯಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A/34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.