ಮುಂಬೈ: ಐಆರ್‌ಎಸ್ ಅಧಿಕಾರಿ ಮತ್ತು ಮುಂಬೈ ಎನ್‌ಸಿಬಿಯ ಮಾಜಿ ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಥಾಣೆಯ ಕೊಪ್ರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮುಂಬೈನಲ್ಲಿ ಬಾರ್‌ಗಾಗಿ ಸುಳ್ಳು ಮಾಹಿತಿ ಕೊಟ್ಟು ಸಮೀರ್ ಪರವಾನಗಿ ಪಡೆದಿದ್ದಾರೆ ಎನ್ನಲಾಗಿದೆ. ವಯಸ್ಸನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ನಿರೂಪಿಸಿ ಹೋಟೆಲ್ ಪರವಾನಗಿ ಪಡೆದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
1996-97ರಲ್ಲಿ ನಗರದ ಸದ್ಗುರು ಬಾರ್‌ಗೆ ಪರವಾನಗಿ ಪಡೆಯುವ ವೇಳೆ ವಾಂಖೆಡೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು. ಆದರೂ ಸಹ ಕಾನೂನುಬಾಹಿರವಾಗಿ ಸುಳ್ಳು ಮಾಹಿತಿ ನೀಡಿ 18 ವರ್ಷ ತುಂಬುವುದರೊಳಗೆ ಪರವಾನಗಿ ಪಡೆದಿದ್ದಾರೆ ಎಂದು ಆರೋಪಿಸಿ ರಾಜ್ಯ ಅಬಕಾರಿ ಇಲಾಖೆ ಅಧಿಕಾರಿ ಶಂಕರ್ ಗೋಗವಾಲೆ ಅವರು ನೀಡಿದ ದೂರಿನ ಮೇರೆಗೆ ಶನಿವಾರ ರಾತ್ರಿ ಕೇಸು ದಾಖಲಿಸಲಾಗಿದೆ. ಈಗಾಗಲೇ ಬಾರ್‌ನ ಪರವಾನಗಿ ರದ್ದುಗೊಳಿಸಿ ಥಾಣೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.