ಹಮೀರ್‌ಪುರ (ಉತ್ತರ ಪ್ರದೇಶ): ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ. ಇದೇ ಕಾರಣಕ್ಕೆ ಶ್ವಾನಗಳು ಮಾನವರೊಂದಿಗೆ ಆತ್ಮೀಯವಾದ ಬಾಂಧವ್ಯ ಹೊಂದಿರುತ್ತವೆ. ಅಲ್ಲದೇ, ಅನೇಕ ಕುಟುಂಬಗಳಲ್ಲಿ ಈ ಮೂಕ ಪ್ರಾಣಿಗಳು ಮನೆಯ ಸದಸ್ಯರಂತೆ ಇರುತ್ತವೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಇಲ್ಲಿದೆ.
ನಾಯಿಯೊಂದು ಏಕಕಾಲಕ್ಕೆ ಒಂಬತ್ತು ಮರಿಗಳಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ಊರಿನ ಜನರಿಗೆ ಊಟ ಹಾಕಿದ ಪ್ರಸಂಗ ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಕಳೆದ ಮೂರು ವರ್ಷಗಳಿಂದಲೂ ಒಂಬತ್ತು ಮರಿಗಳಿಗೆ ನಾಯಿ ಜನ್ಮ ನೀಡುತ್ತಿದ್ದು, ಅದರ ಮಾಲೀಕರ ಸಂಭ್ರಮಕ್ಕೆ ಕಾರಣವಾಗಿದೆ.
ಇಲ್ಲಿನ ಮೇರಾಪುರದ ವಾರ್ಡ್ ನಂ.10ರ ನಿವಾಸಿ ರಾಜಕಾಳಿ ಎಂಬುವವರು 'ಚಟ್ನಿ' ಎಂಬ ಹೆಣ್ಣು ನಾಯಿಯನ್ನು ಸಾಕಿದ್ದಾರೆ. ಒಂದೇ ಬಾರಿಗೆ ಒಂಬತ್ತು ಮರಿಗಳಿಗೆ 'ಚಟ್ನಿ' ಜನ್ಮ ನೀಡಿದೆ. ಸತತ ಮೂರನೇ ವರ್ಷವೂ ಒಂಬತ್ತು ಮರಿಗಳನ್ನು ಜನ್ಮ ಕೊಟ್ಟಿದೆ. ಒಟ್ಟಿಗೆ ಇಷ್ಟೊಂದು ಸಂಖ್ಯೆ ಮರಿಗಳಿಗೆ ಜನ್ಮ ಕೊಟ್ಟಿರುವುದು ರಾಜಕಾಳಿ ಕುಟುಂಬದವರು ಕೇಳಿಲ್ಲ. ಆದ್ದರಿಂದ ಸಾಕಿರುವ ಶ್ವಾನ 'ಚಟ್ನಿ' ಮರಿಗಳಿಗೆ ಜನ್ಮ ನೀಡಿರುವುದಕ್ಕೆ ರಾಜಕಾಳಿ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
'ಚಟ್ನಿ' ತಂದ ಖುಷಿ ಆ ಕುಟುಂಬದಲ್ಲಿ ಎಷ್ಟರಮಟ್ಟಿಗೆ ಇದೆಯೆಂದರೆ ಬುಧವಾರ ಹಬ್ಬವನ್ನೇ ಆಚರಿಸಲಾಗಿದೆ. ನೆರೆಹೊರೆಯವರಿಗೆ ಕುಟುಂಬ ಸಮೇತ ಔತಣ ನೀಡಲಾಗಿದೆ. ಬೆಳಗ್ಗೆಯಿಂದಲೇ ನಾಯಿ ಮರಿಗಳನ್ನು ಸಿಂಗಾರ ಮಾಡಿ, ಅವುಗಳಿಗೆ ಬಣ್ಣ ಹಚ್ಚಿ ಆರತಿ ಎತ್ತಲಾಗಿದೆ. ಔತಣಕೂಟಕ್ಕೆ ಸಂಜೆಯಿಂದಲೇ ಜನರು ಆಗಮಿಸಲು ಶುರು ಮಾಡಿದ್ದು, ತಡರಾತ್ರಿವರೆಗೂ ಔತಣ ನೀಡಲಾಗಿದೆ.
ಇದರಿಂದಾಗಿ ಮೇರಾಪುರದ ವಾರ್ಡ್ ನಂ.10ರಲ್ಲಿ ದೀಪಾವಳಿಗೂ ಮುನ್ನ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ರಾಜಕಾಳಿ ಕುಟುಂಬದವರು ಅತಿಥಿಗಳನ್ನು ಸ್ವಾಗತ ಮತ್ತು ಅವರಿಗೆ ಔತಣವನ್ನು ಉಣಬಡಿಸುವಲ್ಲಿ ನಿರತರಾಗಿದ್ದರು. ಈ ದಾರಿಯಲ್ಲಿ ಹಾದು ಹೋಗುತ್ತಿದ್ದವರಿಗೆ ಯಾವುದೇ ಕುಟುಂಬದ ಕಾರ್ಯಕ್ರಮ ಇರಬೇಕೆಂದು ಭಾವಿಸಿದ್ದರು. ಆದರೆ, ಈ ಸಮಾರಂಭ, ಸಂಭ್ರಮದ ಹಿಂದಿನ ಕಾರಣ ತಿಳಿದಾಗ ಅವರೆಲ್ಲರೂ ನಿಜಕ್ಕೂ ಅಚ್ಚರಿಗೊಂಡರು.
ತಡರಾತ್ರಿವರೆಗೂ ಬರುತ್ತಿದ್ದ ಜನರಿಗೆ ಅನ್ನ, ಪೂರಿ ಮತ್ತು ತರಕಾರಿ ಕರಿ ಸೇರಿದಂತೆ ಒಳ್ಳೆಯ ಊಟ ಉಣಬಡಿಸಲಾಯಿತು. ಮಹಿಳೆಯರು ಹಾಡುಗಳ ಗಾಯನ ಮಾಡಿ ನೃತ್ಯ ಮಾಡಿದರು. ಶ್ವಾನ 'ಚಟ್ನಿ' ಮತ್ತು ಅದರ ನಾಯಿ ಮರಿಗಳೊಂದಿಗೆ ಸೆಲ್ಫಿ ತೆಗೆದುಕೊಂಡು ಜನತೆ ಸಂಭ್ರಮಿಸಿದರು. ಸರಿ ಸುಮಾರು 400 ಜನರು ಈ ಔತಣಕೂಟದಲ್ಲಿ ಭಾಗವಹಿಸಿದ್ದರು ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ: ಒಂದಲ್ಲ, ಎರಡಲ್ಲ, 4 ತಿಂಗಳು; ಶವಾಗಾರದ ಮುಂದೆ ಮೃತ ಮಾಲೀಕನಿಗೋಸ್ಕರ ಎದುರು ನೋಡುತ್ತಿದೆ ಸಾಕು ನಾಯಿ!