ಗಾಂಧಿನಗರ (ಗುಜರಾತ್): ಮಹಾರಾಷ್ಟ್ರ ರಾಜಕೀಯಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಆಡಳಿತಾರೂಢ ಮಹಾ ವಿಕಾಸ ಆಘಾಡಿ ಸರ್ಕಾರದ ಪಾಲುದಾರ ಪಕ್ಷ ಶಿವಸೇನೆಯ ಐವರು ಸಚಿವರು ಸೇರಿ ಸುಮಾರು 21 ಶಾಸಕರು ಪಕ್ಷದ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ, ಸರ್ಕಾರಕ್ಕೆ ಕುತ್ತು ಎದುರಾಗಿದೆ. ಇನ್ನೊಂದೆಡೆ, ಪ್ರತಿಪಕ್ಷ ಬಿಜೆಪಿಗೆ ಈಗ ಶಿವಸೇನೆಯಿಂದಲೇ ತನ್ನ ಶಾಸಕರ ಕುದುರೆ ವ್ಯಾಪಾರದ ಭೀತಿ ಶುರುವಾಗಿದೆ. ಹೀಗಾಗಿ ತನ್ನೆಲ್ಲ 106 ಶಾಸಕರನ್ನು ಗುಜರಾತ್ಗೆ ಶಿಫ್ಟ್ ಮಾಡಲು ಮುಂದಾಗಿದೆ.
ಶಿವಸೇನೆಯ ಪ್ರಬಲ ನಾಯಕ ಏಕನಾಥ ಶಿಂಧೆ ಬಂಡಾಯ ಎದ್ದು ಶಾಸಕರೊಂದಿಗೆ ಗುಜರಾತ್ನ ಸೂರತ್ನಲ್ಲಿರುವ ಮೆರಿಡಿಯನ್ ಹೋಟೆಲ್ಗೆ ಸ್ಥಳಾಂತರಗೊಂಡಿದ್ದಾರೆ. ಹೀಗಾಗಿ ಇದರ ಹಿಂದೆ ಬಿಜೆಪಿಯೇ ಇದೆ ಎಂದು ಮಹಾ ವಿಕಾಸ ಆಘಾಡಿ ಸರ್ಕಾರದ ಕಾಂಗ್ರೆಸ್ ಆರೋಪಿಸಿದೆ. ಈ ನಡುವೆ ಬಿಜೆಪಿಗೆ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸವಾಲು ಕೂಡಾ ಎದುರಾಗಿದೆ.
ಅಮಿತ್ ಶಾ-ನಡ್ಡಾ ಅಖಾಡಕ್ಕೆ: ತನ್ನ ಶಾಸಕರು ಗುಜರಾತ್ಗೆ ಶಿಫ್ಟ್ ಆಗಿರುವುದಕ್ಕೆ ಪ್ರತಿತಂತ್ರವಾಗಿ ಶಿವಸೇನೆಯು ಬಿಜೆಪಿ ಶಾಸಕರ ಮೇಲೆ ಕಣ್ಣು ಹಾಕಿದೆ. ಆದ್ದರಿಂದ ಮಹಾರಾಷ್ಟ್ರದ ಎಲ್ಲ 106 ಶಾಸಕರನ್ನು ವಿಮಾನದ ಮೂಲಕ ಗುಜರಾತ್ಗೆ ಹಾರಿಸುವುದು ಬಿಜೆಪಿ ಮುಂದಾಗಿದೆ. ಅಹ್ಮದಾಬಾದ್ ಸಮೀಪದ ರೆರ್ಸಾಟ್ಗೆ ಎಲ್ಲರನ್ನೂ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲ, ಕೇಂದ್ರ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಅಹ್ಮದಾಬಾದ್ಗೆ ತೆರಳಿದ್ದಾರೆ. ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಸೂರತ್ಗೆ ಧಾವಿಸಿದ್ದು, ಏಕನಾಥ ಶಿಂಧೆ ಅವರನ್ನು ಭೇಟಿ ಮಾಡಲಿದ್ದಾರೆ. ಆ ಬಳಿಕ ಅಹ್ಮದಾಬಾದ್ನಲ್ಲಿ ಎಲ್ಲ ನಾಯಕರು ಮುಂದಿನ ನಡೆ ಬಗ್ಗೆ ಚರ್ಚಿಸಲಿದ್ದಾರೆ ಎಂದು ವರದಿಯಾಗಿದೆ.
ಇನ್ನೂ 7 ಶಿವಸೇನೆ ಶಾಸಕರು ಜಂಪ್: ಈ ನಡುವೆ ಇನ್ನೂ ಏಳು ಶಿವಸೇನೆ ಶಾಸಕರು ಸಹ ದೆಹಲಿ ಮೂಲಕ ಸೂರತ್ಗೆ ಬರಲಿದ್ದಾರೆ. ಬಿಜೆಪಿ ನಾಯಕರೊಂದಿಗೆ ಮಾತುಕತೆ ಪೂರ್ಣವಾದ ಬಳಿಕ ಏಕನಾಥ ಶಿಂಧೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: 'ಮಹಾ' ರಾಜಕೀಯ ಅಸ್ಥಿರ: ಶಿವಸೈನಿಕ ಶಿಂಧೆ ಬಂಡಾಯ, ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ವಜಾ