ಪಾಟ್ನಾ : LJP ವಿಭಜನೆಯ ನಂತರ ಬಿಹಾರ ರಾಜಕೀಯದಲ್ಲಿ ಬಿರುಗಾಳಿ ಎದ್ದಿದೆ. ಆದರೆ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಅವರ ಕಿರಿಯ ಮಗ ತೇಜಸ್ವಿ ಯಾದವ್ ಈ ವಿಷಯದ ಬಗ್ಗೆ ಏಕೆ ತುಟಿ ಬಿಚ್ಚಿಲ್ಲ ಎಂಬ ಪ್ರಶ್ನೆ ಎದ್ದಿದೆ. ಇದು ಮೊದಲ ಬಾರಿಗೆ ಅಲ್ಲ, ಈ ಹಿಂದೆಯೂ ಸಾಕಷ್ಟು ಆಘಾತಕಾರಿ ವಿದ್ಯಮಾನಗಳು ನಡೆದಾಗ ಆರ್‌ಜೆಡಿ ಮೌನ ತಾಳಿದೆ. ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅಥವಾ ಜೆಎಪಿ ನಾಯಕ ಪಪ್ಪು ಯಾದವ್ ಅವರ ವಿಷಯವಾಗಲಿ, ಈ ಎಲ್ಲಾ ವಿಚಾರಗಳಲ್ಲೂ ಆರ್‌ಜೆಡಿ ಯಾವಾಗಲೂ ಮೌನ ಕಾಪಾಡಿಕೊಂಡಿದೆ.
ತೇಜಸ್ವಿ ಯಾದವ್ ಹೊರತುಪಡಿಸಿ ಬೇರೆ ಯಾವುದೇ ಯುವ ನಾಯಕರನ್ನು ಬೆಳೆಸಲು ಆರ್‌ಜೆಡಿ ಬಯಸುವುದಿಲ್ಲವಾದ್ದರಿಂದ ರಾಜಕೀಯ ಕಾರ್ಯತಂತ್ರದಡಿಯಲ್ಲಿ ಚಿರಾಗ್ ಪಾಸ್ವಾನ್ ವಿಷಯದ ಬಗ್ಗೆ ಆರ್ಜೆಡಿಯ ಉನ್ನತ ನಾಯಕತ್ವ ಮೌನ ಕಾಯುತ್ತಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಐದು ದಿನಗಳಿಂದ ಎಲ್‌ಜೆಪಿಯೊಳಗೆ ದೊಡ್ಡ ಯುದ್ಧವೇ ನಡೆಯುತ್ತಿದೆ. ಈಗ ಅದು ತೀವ್ರಗೊಂಡಿದೆ. ಆದರೆ, ಲಾಲು ಪ್ರಸಾದ್ ಮತ್ತು ತೇಜಸ್ವಿ ಯಾದವ್ ಇಬ್ಬರೂ ಈ ಬಗ್ಗೆ ಒಂದೇ ಒಂದು ಹೇಳಿಕೆಯನ್ನು ನೀಡಿಲ್ಲ.
ಟ್ವಿಟರ್ ಮತ್ತು ಫೇಸ್‌ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿರುವ ಇಬ್ಬರೂ ನಾಯಕರು ಈ ವಿಚಾರದಲ್ಲಿ ಮೌನವಾಗಿದ್ದಾರೆ. ಇದನ್ನು ಜೀರ್ಣಿಸಿಕೊಳ್ಳುವುದು ಕಷ್ಟ ಎಂದು ಹಲವು ನಾಯಕರು ಪ್ರತಿಕ್ರಿಯಿಸಿದ್ದಾರೆ. ಆರ್‌ಜೆಡಿ ಹೊರತುಪಡಿಸಿ ವಿವಿಧ ರಾಜಕೀಯ ಪಕ್ಷಗಳ ಉನ್ನತ ನಾಯಕರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.
ಪಾಟ್ನಾ ಮೂಲದ ರಾಜಕೀಯ ತಜ್ಞ ಡಾ.ಸಂಜಯ್ ಕುಮಾರ್ ಅವರು, ಯಾವುದೇ ಯುವ ರಾಜಕಾರಣಿ ತನ್ನದೇ ಆದ ಐಡಿಂಟಿಟಿ ರೂಪಿಸಿಕೊಳ್ಳಲು ಅಥವಾ ಜನಪ್ರಿಯವಾಗಲು ಬಯಸಿದಾಗ, ಆರ್‌ಜೆಡಿ ಮೌನ ತಾಳುತ್ತದೆ. ಯಾವುದೇ ಹೇಳಿಕೆ ನೀಡುವುದರಿಂದ ದೊಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಆರ್‌ಜೆಡಿ ಆತಂಕ ವ್ಯಕ್ತಪಡಿಸಿದೆ. ಕನ್ಹಯ್ಯ ಕುಮಾರ್ ಅವರ ವಿಷಯದಲ್ಲಿಯೂ ಆಗಿದ್ದು ಇದೆ.
ಏಕೆಂದರೆ, ವಿರೋಧ ಪಕ್ಷದ ಭಾಗವಾಗಿದ್ದರೂ ಸಹ ತೇಜಸ್ವಿ, ಕನ್ಹಯ್ಯಾಕುಮಾರ್ ಅವರೊಂದಿಗೆ ಎಂದಿಗೂ ವೇದಿಕೆ ಹಂಚಿಕೊಂಡಿಲ್ಲ. ಯುವ ಮುಖಗಳನ್ನು ಹೊಂದಿರುವ ಪಕ್ಷದ ಸಹವಾಸಕ್ಕೆ ಆರ್‌ಜೆಡಿ ಎಂದಿಗೂ ಹೋಗುವುದಿಲ್ಲ ಎಂದಿದ್ದಾರೆ. ಚಿರಾಗ್ ಮತ್ತು ತೇಜಸ್ವಿ ಇಬ್ಬರೂ ಬಿಹಾರದ ಮುಖ್ಯಮಂತ್ರಿಯಾಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ ಮತ್ತು ಈ ನಿರ್ದಿಷ್ಟ ಅಂಶವು ಚಿರಾಗ್ ಅವರನ್ನು ಯುವ ನಾಯಕನಾಗಿ ಸ್ವೀಕರಿಸಲು ತೇಜಸ್ವಿಗೆ ದೊಡ್ಡ ಅಡಚಣೆಯಾಗಿದೆ ಎಂದು ಡಾ.ಸಂಜಯ್ ಒತ್ತಿ ಹೇಳಿದ್ದಾರೆ.