ಅನ್ನಮಯ್ಯ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ನಡೆದ ಇಂಜಿನಿಯರಿಂಗ್ ವಿದ್ಯಾರ್ಥಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ತಂದೆಯೇ ತನ್ನ ಮಗನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ತನಿಖೆಯಲ್ಲಿ ಬಯಲಾಗಿದೆ. ಇದೀಗ ಕೊಲೆಯಾದ ವಿದ್ಯಾರ್ಥಿಯ ತಂದೆ ಸೇರಿ ಮೂವರನ್ನು ಬಂಧಿಸಲಾಗಿದೆ.
ಅನ್ನಮಯ್ಯ ಜಿಲ್ಲೆಯ ತಂಬಳ್ಳಪಲ್ಲೆ ಮಂಡಲದ ಕುತ್ತಿಕಿಬಂಡಾ ತಾಂಡಾದ ರೆಡ್ಡೆಪ್ಪ ನಾಯ್ಕ್ ಎಂಬಾತನೇ ತನ್ನ ಮಗನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ ತಂದೆ. ಈತನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ಟ್ಯಾಗೋರ್ ನಾಯ್ಕ್ (22) ಚೆನ್ನೈನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಎರಡನೇ ವರ್ಷ ಓದುತ್ತಿದ್ದ. ಆದರೆ, ಇತ್ತೀಚೆಗೆ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿ ಅದನ್ನು ಮಾರಾಟ ಮಾಡಿದ್ದ. ಆ ಹಣದಲ್ಲಿ ಮದ್ಯ, ಗಾಂಜಾ ಸೇವಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ.
ಈ ಬಗ್ಗೆ ತಂದೆ ರೆಡ್ಡೆಪ್ಪ ನಾಯ್ಕ್ ಹಾಗೂ ಸಹೋದರ ಪ್ರಶ್ನಿಸಿದ್ದರು. ಆಗ ತಂದೆಯನ್ನೇ ಕೊಲ್ಲುವುದಾಗಿ ಟ್ಯಾಗೋರ್ ನಾಯ್ಕ್ ಬೆದರಿಕೆ ಹಾಕಿದ್ದ. ಹೀಗಾಗಿ ಎಂದಾದರೂ ಕುಟುಂಬಕ್ಕೆ ಅಪಾಯವಾಗುತ್ತಾನೆ ಎಂದು ಭಾವಿಸಿದ ತಂದೆ, ಮಗನ ಕೊಲೆ ಬಗ್ಗೆ ಯೋಚನೆ ಮಾಡಿದ್ದರು. ಅಂತೆಯೇ ತಂದೆ ರೆಡ್ಡಪ್ಪ ನಾಯ್ಕ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ತನ್ನ ಸಂಬಂಧಿ ಬಿ.ಶೇಖರ್ ನಾಯ್ಕ್ ಬಳಿ ವಿಷಯವನ್ನು ವಿವರಿಸಿದ್ದರು. ಅಲ್ಲದೇ, ಮಗನನ್ನು ಕೊಂದರೆ 2 ಲಕ್ಷ ರೂ. ಕೊಡುತ್ತೇನೆ ಎಂದು ಹೇಳಿದ್ದರು.
ಮುಂಗಡವಾಗಿ 50 ಸಾವಿರ ರೂ. ಪಡೆದ ಬಿ.ಶೇಖರ್ ನಾಯ್ಕ್, ಕ್ರಿಮಿನಲ್ ಬಿ.ಪ್ರತಾಪ್ ನಾಯ್ಕ್ ಎಂಬಾತನೊಂದಿಗೆ ಒಪ್ಪಂದ ಮಾಡಿಕೊಂಡು ಟ್ಯಾಗೋರ್ ನಾಯ್ಕ್ ಕೊಲೆಯ ಸಂಚು ರೂಪಿಸಿದ್ದಾರೆ. ಈ ಸಂಚಿನ ಭಾಗವಾಗಿ ಕಳೆದ ಜೂನ್ 28ರಂದು ಮದನಪಲ್ಲಿ ಸಮೀಪ ಟ್ಯಾಗೋರ್ ನಾಯ್ಕ್ನನ್ನು ಶೇಖರ್ ಮತ್ತು ಪ್ರತಾಪ್ ಕರೆದೊಯ್ದಿದ್ದಾರೆ. ಅಲ್ಲಿ ಮೂವರು ಸೇರಿಕೊಂಡು ಮದ್ಯ ಸೇವಿಸಿದ್ದಾರೆ. ಈ ವೇಳೆ ಟ್ಯಾಗೋರ್ ನಾಯ್ಕ್ ಅತಿಯಾಗಿ ಮದ್ಯ ಸೇವಿಸಿ ನಶೆಗೆ ಜಾರಿದ್ದಾನೆ. ಇದೇ ಸಮಯವನ್ನು ಬಳಸಿಕೊಂಡು ದುಷ್ಕರ್ಮಿಗಳು ಟ್ಯಾಗೋರ್ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ ಮೃತ ದೇಹವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಜುಲೈ 2ರಂದು ಶವದ ದುರ್ವಾಸನೆ ಬರುವುದನ್ನು ಗಮನಿಸಿದ ಕುರಿಗಾಹಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ಅನುಮಾನಾಸ್ಪದ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಮರಣೋತ್ತರ ಪರೀಕ್ಷೆಯಲ್ಲಿ ಇದೊಂದು ಕೊಲೆ ಎಂಬುದು ಬೆಳಕಿಗೆ ಬಂದಿದೆ. ಆದ್ದರಿಂದ ಇದನ್ನು ಕೊಲೆ ಪ್ರಕರಣವನ್ನಾಗಿ ತನಿಖೆ ನಡೆಸಿದಾಗ ತಂದೆಯ ಕೃತ್ಯ ಬಯಲಿಗೆ ಬಂದಿದೆ. ಅಂತೆಯೇ ಈ ಕೊಲೆಯ ಮಾಸ್ಟರ್ ಮೈಂಡ್ ತಂದೆ ರೆಡ್ಡೆಪ್ಪನಾಯಕ್ ಹಾಗೂ ಆರೋಪಿಗಳಾದ ಶೇಖರ್ ನಾಯ್ಕ್ ಮತ್ತು ಪ್ರತಾಪ್ ನಾಯ್ಕ್ನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಎಣ್ಣೆ ಏಟಲ್ಲಿ ನಂಬರ್‌ಪ್ಲೇಟ್ ಬದಲಿಸಿ ವಾಹನ ಕದ್ದು ಮಾರುತ್ತಿದ್ದ ಇಬ್ಬರ ಬಂಧನ