ಚಂಡೀಗಢ : ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಗಳ ಅಂಗಾಂಗಗಳನ್ನು ತಂದೆಯೊಬ್ಬರು ದಾನ ಮಾಡುವ ಮೂಲಕ 9 ಮಂದಿಗೆ ಜೀವದಾನ ಮಾಡಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ.
ಡಿಸೆಂಬರ್ 12ರಂದು ಪಂಜಾಬ್‌ನ ಮೊಹಾಲಿ ಎಂಬಲ್ಲಿ ರಸ್ತೆ ಅಪಘಾತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ್ದರು. ಅಪಘಾತದಲ್ಲಿ ಎರಡೂವರೆ ವರ್ಷದ ಬಾಲಕಿ ಗಾಯಗೊಂಡಿದ್ದಳು. ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಂಡೀಗಢ ಪಿಜಿಐಗೆ ದಾಖಲಿಸಲಾಗಿತ್ತು. ಆದರೆ, ಬಾಲಕಿಯ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಳು.
ಅನಾಯಕ ಎಂಬುವಳು ಮೃತ ಬಾಲಕಿ. ರಸ್ತೆ ಅಪಘಾತದಲ್ಲಿ ಇಡೀ ಕುಟುಂಬವನ್ನು ಕಳೆದುಕೊಂಡರೂ ಕೂಡ ಅನಾಯಕನ ತಂದೆ ಅಮಿತ್ ಗುಪ್ತಾ ತನ್ನ ಮಗಳ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದರು. ಈ ಒಂದು ನಿರ್ಧಾರದಿಂದ 9 ಮಂದಿ ರೋಗಿಗಳಿಗೆ ಇದೀಗ ಹೊಸ ಬದುಕು ಸಿಗಲಿದೆ.
ಪಿಜಿಐ ವೈದ್ಯರು ಅಂಗಾಂಗ ದಾನ ಪ್ರಕ್ರಿಯೆ ಪ್ರಾರಂಭಿಸಿದ್ದು, ಬಾಲಕಿಯ ಹೃದಯವನ್ನು ಚೆನ್ನೈಗೆ, ಯಕೃತ್ ಅನ್ನು ಅಹಮದಾಬಾದ್‌ಗೆ ಕಳುಹಿಸಿದ್ದಾರೆ. ರೋಗಿಗಳಿಗೆ ಮೇದೋಜೀರಕ ಗ್ರಂಥಿ, ಮೂತ್ರಪಿಂಡ ಮತ್ತು ಕಣ್ಣಿನ ಕಸಿ ಮಾಡಲು ಹೊಂದಾಣಿಕೆ ಮಾಡಲಾಗುತ್ತಿದೆ.
ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಅಮಿತ್ ಗುಪ್ತಾ, ರಸ್ತೆ ಅಪಘಾತದಲ್ಲಿ ಪತ್ನಿ ಕೀರ್ತಿ ಗುಪ್ತಾ (33), ಸಹೋದರ ನುವಂಶ್ (6), ಚಿಕ್ಕಪ್ಪ ಅನುಜ್ ಬನ್ಸಾಲ್ (30 ), ಅಜ್ಜಿ ಉಷಾ ರಾಣಿ (60) ಮತ್ತು ಸಹೋದರಿಯನ್ನು ಕಳೆದುಕೊಂಡಿದ್ದೇನೆ. ಅಪಘಾತದ ವೇಳೆ ಅನಾಯಕ ತಲೆಗೆ ತೀವ್ರ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು.
ಕೂಡಲೇ ಆಕೆಯನ್ನು ಚಂಡೀಗಢದ ಪಿಜಿಐಗೆ ಕರೆತರಲಾಯಿತಾದರೂ ಜೀವ ಉಳಿಯಲಿಲ್ಲ. ಪ್ರೀತಿಯ ಮಗಳನ್ನು ಕಳೆದುಕೊಂಡು ತುಂಬಾ ದುಃಖಿತನಾಗಿದ್ದೇನೆ. ಆದರೆ, 9 ಜನರಿಗೆ ಅವಳ ಅಂಗಾಂಗಗಳಿಂದ ಹೊಸ ಜೀವನ ಸಿಗುತ್ತಿದೆ. ಈ ಮೂಲಕವಾದರೂ ನನ್ನ ಮಗಳು ಜೀವಂತವಾಗಿರುತ್ತಾಳೆ ಎಂದು ಹೇಳಿದರು. ಅಮಿತ್ ಗುಪ್ತಾ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪಿಜಿಐ, ಇತರರಿಗೂ ಇದು ಸ್ಫೂರ್ತಿ ನೀಡುತ್ತದೆ ಎಂದು ಹೇಳಿದೆ.