ಹಿಸಾರ್/ಹರಿಯಾಣ: ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಕ್ಕಾಗಿ 350 ಕ್ಕೂ ಹೆಚ್ಚು ರೈತರ ವಿರುದ್ಧ ಎಫ್ಐಆರ್ ದಾಖಲಾದ ಹಿನ್ನೆಲೆ ಅದನ್ನು ವಿರೋಧಿಸಿ ಹರಿಯಾಣದ ಹಿಸಾರ್ ರೈತರು ಇಂದು ಪ್ರತಿಭಟನೆಗೆ ಮುಂದಾಗಿದ್ದಾರೆ.
ಈಗಾಗಲೇ 3 ಸಾವಿರಕ್ಕೂ ಹೆಚ್ಚು ರೈತರು ಹಿಸಾರ್‌ನ ಕ್ರಾಂತಿಮಾನ್ ಉದ್ಯಾನ ತಲುಪಿದ್ದಾರೆ. ವಿವಿಧ ಜಿಲ್ಲೆಗಳ ರೈತರು ಟ್ರ್ಯಾಕ್ಟರ್ ಮತ್ತು ವಾಹನಗಳಲ್ಲಿ ಹಿಸಾರ್ ತಲುಪುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ಖಾಪ್ ನಾಯಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತಲುಪಿದ್ದಾರೆ. ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಸಹ ಅವರನ್ನು ಬೆಂಬಲಿಸಲು ಹಿಸಾರ್ಗೆ ತಲುಪಿದ್ದಾರೆ ಎಂಬ ಮಾಹಿತಿ ಇದೆ.
ರೈತರ ಪ್ರತಿಭಟನೆ ಹಿನ್ನೆಲೆ ಈಗಾಗಲೇ ಹಿಸಾರ್‌ನ 7 ಜಿಲ್ಲೆಗಳ ಪೊಲೀಸರಿಗೆ ಜಿಲ್ಲಾಡಳಿತ ಕರೆ ಮೂಲಕ ಸಂಪರ್ಕಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಸುಮಾರು 4 ಸಾವಿರ ಸೈನಿಕರನ್ನು ನಿಯೋಜಿಸಲಾಗಿದೆ.
ಮೇ 16 ರಂದು ಹಿಸಾರ್‌ನಲ್ಲಿ ನಡೆದಿದ್ದೇನು?
ಮೇ 16 ರಂದು ಸಿಎಂ ಮನೋಹರ್ ಲಾಲ್ ಖಟ್ಟರ್ ಕೋವಿಡ್ ಆಸ್ಪತ್ರೆಯ ಉದ್ಘಾಟನೆಗೆ ಆಗಮಿಸಿದ್ದರು. ಈ ವೇಳೆ, ರೈತರು ಈ ಸ್ಥಳದತ್ತ ಮೆರವಣಿಗೆ ನಡೆಸಲು ಉದ್ದೇಶಿಸಿದ್ದರು. ಈ ಬಳಿಕ ಹಿಂಸಾಚಾರ ಭುಗಿಲೆದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು. ಖಟ್ಟರ್ ಕೋವಿಡ್ ಆಸ್ಪತ್ರೆಯ ಉದ್ಘಾಟನೆ ಬಳಿಕ ಪೊಲೀಸರ ಕ್ರಮದಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಹೆದ್ದಾರಿ ಬಂದ್ ಮಾಡಿದರು. ಈ ಹಿನ್ನೆಲೆ ಪೊಲೀಸರು ಕೆಲವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಸದ್ಯ ಮೇ 16ರ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 350 ಕ್ಕೂ ಹೆಚ್ಚು ಜನರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಪೊಲೀಸರ ಈ ಕ್ರಮದ ವಿರುದ್ಧ ರೈತರು ಇದೀಗ ಪ್ರತಿಭಟನೆಗೆ ಮುಂದಾಗಿದ್ದಾರೆ.