ನವದೆಹಲಿ: ರೈತರ ದೆಹಲಿ ಚಲೋಗೆ ಮಣಿದ ಸರ್ಕಾರ ದೆಹಲಿ ಪ್ರವೇಶಿಸಲು ರೈತರಿಗೆ ಕೊನೆಗೂ ಅನುಮತಿ ನೀಡಿದ್ದು, ಡಿಸೆಂಬರ್ 3 ರಂದು ರೈತರೊಂದಿಗೆ ಸಂವಾದ ನಡೆಸಲು ಆಹ್ವಾನಿಸಿದೆ. ಈ ಕುರಿತಂತೆ ಇಂದು ಬೆಳಗ್ಗೆ ಅಧಿಕಾರಿಗಳು ಮತ್ತು ಒಕ್ಕೂಟಗಳ ನಡುವೆ ಸಭೆ ನಡೆಯುತ್ತಿದೆ.
ರೈತರು ಬುರಾರಿಯ ನಿರಂಕರಿ ಮೈದಾನದಲ್ಲಿ ಪ್ರತಿಭಟನೆಯನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂದು ಇಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ನಿನ್ನೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ರೈತ ಸಂಘದ ನಡುವಿನ ಸಭೆಯ ನಂತರ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಲಾಗಿತ್ತು. ಜೊತೆಗೆ ನಗರದ ನಿರಂಕರಿ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಸ್ಥಳ ನಿಗದಿ ಮಾಡಲಾಗಿತ್ತು.
ಇದನ್ನೂ ಓದಿ: ಅನ್ನದಾತರ ಕೂಗಿಗೆ ಮಣಿದ ಸರ್ಕಾರ: ದೆಹಲಿ ಪ್ರವೇಶಕ್ಕೆ ಅವಕಾಶ
ಇನ್ನು ರೈತರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಜೊತೆಗೆ ಅಹಂಕಾರವು ಸತ್ಯದೊಂದಿಗೆ ಘರ್ಷಣೆಯಾದಾಗಲೆಲ್ಲಾ ಅದನ್ನು ಸೋಲಿಸಲಾಗುತ್ತದೆ ಎಂಬುದನ್ನು ಪ್ರಧಾನಿ ನೆನಪಿನಲ್ಲಿಟ್ಟುಕೊಳ್ಳಬೇಕು. ವಿಶ್ವದ ಯಾವುದೇ ಸರ್ಕಾರವು ಸತ್ಯಕ್ಕಾಗಿ ಹೋರಾಡುವ ರೈತರನ್ನು ತಡೆಯಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದರು.