ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆ ವಿರೋಧಿಸಿ ಕಳೆದ ಎರಡು ತಿಂಗಳಿಂದ ಅನ್ನದಾತರು ಪ್ರತಿಭಟನೆ ನಡೆಸುತ್ತಿದ್ದು, ಇದೀಗ ಅದು ಮತ್ತೊಂದು ಹೊಸ ರೂಪ ಪಡೆದುಕೊಂಡಿದೆ.
ಜನವರಿ 26ರಂದು ಟ್ರ್ಯಾಕ್ಟರ್ ಪರೇಡ್ ವೇಳೆ ಕೆಂಪುಕೋಟೆ ಬಳಿ ನಡೆದ ಹಿಂಸಾಚಾರದ ನಂತರ ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆ ಮತ್ತೊಂದು ರೂಪ ಪಡೆದುಕೊಂಡಿದ್ದು, ರಾಜಕೀಯ ಪಕ್ಷಗಳ ನಡುವೆ ಕೇಸರೆರಚಾಟ ನಡೆದಿತ್ತು. ಆದರೆ, ನಿನ್ನೆ ಅಂತಾರಾಷ್ಟ್ರೀಯ ಪಾಪ್ ತಾರೆ ರಿಹಾನಾ ರೈತರ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡುತ್ತಿದ್ದಂತೆ ಇದೀಗ ಅದು ಸ್ಟಾರ್ ವಾರ್ ರೂಪ ಪಡೆದುಕೊಂಡಿದೆ.
ರಿಹನ್ನಾ ಟ್ವೀಟ್ ಮಾಡ್ತಿದ್ದಂತೆ ಅನೇಕ ಬಾಲಿವುಡ್ ನಟರು ಇಂಡಿಯಾ ಅಗೆನೆಸ್ಟ್ ಪ್ರೊಪಗಾಂಡ ಹಾಗೂ ಇಂಡಿಯಾ ಟುಗೆದರ್ ಎಂದು ಟ್ವೀಟ್ ಮಾಡಲು ಶುರು ಮಾಡಿದ್ದಾರೆ. ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಕೂಡ ಅನೇಕರು ಟ್ವೀಟ್ ಮಾಡಿದ್ದಾರೆ. ಹೀಗಾಗಿ ಸದ್ಯ ಪ್ರತಿಭಟನೆ ಸ್ಟಾರ್ ವಾರ್ ರೂಪ ಪಡೆದುಕೊಂಡಿದೆ.
ಓದಿ: ರೈತರು ಸ್ವಾವಲಂಬಿಯಾಗಲು ಕಳೆದ ಐದು ವರ್ಷಗಳಿಂದ ಕ್ರಮ ಕೈಗೊಂಡಿದ್ದೇವೆ: ಪಿಎಂ ಮೋದಿ
ಘಾಜಿಪುರ್, ಸಿಂಘು ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಅವರನ್ನ ಭೇಟಿಯಾಗಲು ಇಂದು ಶಿರೋಮಣಿ ಅಕಾಲಿದಳದ ಹರ್ ಸಿಮ್ರತ್ ಕೌರ್ ಬಾದಲ್,ಎನ್ಸಿಪಿಯ ಸುಪ್ರಿಯಾ ಸುಳೆ, ಡಿಎಂಕೆ ಪಕ್ಷದ ಕನಿಮೋಳಿ ಹಾಗೂ ತೃಣಮೂಲ ಕಾಂಗ್ರೆಸ್ನ ರಾಯ್ ಸಹಿತ್ ತೆರಳಿದ್ದರು. ಆದರೆ, ಇವರನ್ನ ಪೊಲೀಸರು ತಡೆಯುವ ಕೆಲಸ ಸಹ ಮಾಡಿದ್ದಾರೆ. ಇದೇ ವಿಚಾರವಾಗಿ ಅಮೆರಿಕ ಕೂಡ ಭಾರತ ಪರ ಬ್ಯಾಟ್ ಬೀಸಿದ್ದು, ತಾವು ಕೃಷಿ ಕಾಯ್ದೆ ಪರವಾಗಿದ್ದೇವೆ ಎಂದು ಹೇಳಿಕೊಂಡಿದ್ದು, ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಮನವಿ ಮಾಡಿದೆ.