ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನಾನಿರತ ರೈತರೊಂದಿಗೆ ಕೇಂದ್ರ ಸರ್ಕಾರ ಈವರೆಗೂ ನಡೆಸಿದ ಎಲ್ಲಾ ಮಾತುಕತೆಗಳು ವಿಫಲಗೊಂಡಿದ್ದು, ಗುರುವಾರ ಮತ್ತೊಂದು ಸುತ್ತಿನ ಸಭೆ ನಡೆಸಲಿದೆ. ಈ ಸಭೆಯಲ್ಲಿ ಭಾಗಿಯಾಗಲು ರೈತ ಸಂಘಟನೆಗಳೂ ಒಪ್ಪಿಗೆ ನೀಡಿವೆಯಂತೆ.
ಇಂದೂ ಕೂಡ ದೆಹಲಿಯ ಗಡಿಭಾಗಗಳಲ್ಲಿ ರೈತ ಸಂಘಟನೆಗಳ ಪ್ರತಿಭಟನೆ ಮುಂದುವರೆದಿದ್ದು, ಪ್ರತಿಭಟನಾನಿರತ ರೈತರು ಗಾಜಿಯಾಬಾದ್ ಗಡಿ ಸಮೀಪ ರಸ್ತೆಯಲ್ಲಿ ಕುಳಿತ ಊಟ ಮಾಡಿದ್ದಾರೆ.
ಪಶ್ಚಿಮ ಉತ್ತರಪ್ರದೇಶದ ವಿವಿಧ ಜಿಲ್ಲೆಗಳ ರೈತರು ದೆಹಲಿ-ನೊಯ್ಡಾ ಗಡಿ ಭಾಗದಲ್ಲಿ ಜಮಾಯಿಸಿದ್ದು, ದೆಹಲಿಯಲ್ಲಿ ಹರಿಯಾಣ-ಪಂಜಾಬ್ ರೈತರು ಆಂಭಿಸಲಿರುವ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ರಾಜಧಾನಿಯತದ್ತ ಹೊರಟಿದ್ದಾರೆ. ಇದರಿಂದ ಉತ್ತರ ಪ್ರದೇಶವನ್ನು ರಾಷ್ಟ್ರ ರಾಜಧಾನಿಯೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗಗಳ ಸಂಚಾರ ಸ್ಥಗಿತಗೊಂಡಿದೆ. ಈ ಮಾರ್ಗದ ಬದಲಿಗೆ ಪ್ರಯಾಣಿಕರು ದೆಹಲಿ-ನೋಯ್ಡಾ ಡೈರೆಕ್ಟ್ ರೋಡ್ ಅಥವಾ ಕಲಿಂದಿ ಕುಂಜ್ ರಸ್ತೆ ಮೂಲಕ ಸಂಚರಿಸುವಂತೆ ದೆಹಲಿ ಸಂಚಾರ ಪೊಲೀಸರು ಹೇಳಿದ್ದಾರೆ.