ನವದೆಹಲಿ: ಹೊಸ ಕೃಷಿ ಕಾನೂನುಗಳು ಹೂಡಿಕೆ, ಹೊಸ ತಂತ್ರಜ್ಞಾನಗಳನ್ನು ತಂದು ಉದ್ಯೋಗ ಸೃಷ್ಟಿಸಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಕೇಂದ್ರ ಬಜೆಟ್‌ನ ಪ್ರಮುಖ ಲಕ್ಷಣಗಳನ್ನು ಎತ್ತಿ ಹಿಡಿಯುವ ಸಂಬಂಧ ಬಿಜೆಪಿಯ ಯುವ ವಿಭಾಗವು ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. "ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ 40,000 ಕೋಟಿ ರೂ. ಕೃಷಿ ಅಭಿವೃದ್ಧಿಗೆ ಹೊಸ ಆಯಾಮ ನೀಡಲಿದೆ. ಕೊರೊನಾ ಸಂದರ್ಭದಲ್ಲಿ ಆರ್ಥಿಕತೆಗೆ ಪೆಟ್ಟು ಬಿದ್ದಿತ್ತು. ಆದರೂ ಬಜೆಟ್ ಮಂಡಿಸಲಾಗಿದೆ" ಎಂದರು.
"ಕೊಳೆಗೇರಿ ನಿವಾಸಿಗಳು, ಬೀದಿ ಬದಿ ವ್ಯಾಪಾರಿಗಳು ಮತ್ತು ನಿವಾಸಿ ಕಲ್ಯಾಣ ಸಂಘಗಳು ಸೇರಿದಂತೆ ಸಮಾಜದ ವಿವಿಧ ವರ್ಗಗಳೊಂದಿಗೆ ಬಜೆಟ್‌ನ ನಿಬಂಧನೆಗಳ ಕುರಿತು ಚರ್ಚೆ ನಡೆಸಬೇಕು. ಅವರ ಆಕಾಂಕ್ಷೆಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು" ಎಂದು ದೆಹಲಿ ಬಿಜೆಪಿ ಮುಖಂಡರನ್ನು ಪ್ರಧಾನ್ ಆಗ್ರಹಿಸಿದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ಹಂಚಿಕೆಯನ್ನು ಶೇಕಡಾ 137 ರಷ್ಟು ಹೆಚ್ಚಿಸಲಾಗಿದೆ ಎಂದರು. "ಆರೋಗ್ಯ ಬಜೆಟ್ 35,000 ಕೋಟಿ ರೂಪಾಯಿಗಳನ್ನು ಹೊಂದಿದೆ. 'ವಸುದೈವ ಕುಟುಂಬಕಂ' ತತ್ತ್ವಶಾಸ್ತ್ರಕ್ಕೆ ಅನುಗುಣವಾಗಿರುವ ಕೊರೊನಾ ಲಸಿಕೆಯನ್ನು ನಾವು ಹಲವಾರು ದೇಶಗಳಿಗೆ ನೀಡಿ ಸಹಾಯ ಮಾಡುತ್ತಿದ್ದೇವೆ" ಎಂದು ಸಚಿವರು ಹೇಳಿದರು.
ಒಂದು ದೇಶದ ಆರ್ಥಿಕ ಶಕ್ತಿ ನಾವೀನ್ಯತೆ ಮತ್ತು ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ ಮತ್ತು ಬಜೆಟ್ ಸಹ ಅದರ ಮೇಲೆ ಕೇಂದ್ರೀಕರಿಸಿದೆ ಎಂದು ಅವರು ಹೇಳಿದರು.