ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ, ಭಾರತದಲ್ಲಿ ಗ್ರಾಹಕರು ಇನ್ನೂ ಇದರ ಪ್ರಯೋಜನ ಪಡೆಯುತ್ತಿಲ್ಲ. ಹೀಗಾಗಿ, ಕೇಂದ್ರ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ದರ ಇಳಿಕೆಗೆ ಅನುಗುಣವಾಗಿ ದೇಶೀಯ ಮಾರುಕಟ್ಟೆಯಲ್ಲೂ ಅಡುಗೆ ಎಣ್ಣೆಯ ಬೆಲೆಯನ್ನು ಕಡಿಮೆ ಮಾಡುವಂತೆ ತೈಲ ಕಂಪನಿಗಳಿಗೆ ಸೂಚಿಸಿದೆ.
ಸ್ಟಾಕ್ ಹೋಲ್ಡರ್ಗಳೊಂದಿಗೆ ಗುರುವಾರ ಸಭೆ ನಡೆಸಿ ಮಾತನಾಡಿದ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ, "ತಕ್ಷಣದಿಂದಲೇ ಗ್ರಾಹಕರು ಬೆಲೆ ಇಳಿಕೆಯ ಲಾಭವನ್ನು ಪಡೆಯಬೇಕು. ಏಕೆಂದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಖಾದ್ಯ ತೈಲಗಳ ಬೆಲೆ ಇಳಿಕೆಯಾಗಿದ್ದು, ಇದು ದೇಶೀಯ ಮಾರುಕಟ್ಟೆಗಳ ಮೇಲೆ ಸಹ ಪರಿಣಾಮ ಬೀರುತ್ತದೆ. ಸ್ಟಾಕ್ ಹೋಲ್ಡರ್ಗಳು ತಕ್ಷಣವೇ ಈ ಸಮಸ್ಯೆಯನ್ನು ಗಣನೆಗೆ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಜೊತೆಗೆ, ಕೂಡಲೇ ಜಾರಿಗೆ ಬರುವಂತೆ ಅಡುಗೆ ಎಣ್ಣೆಗಳ ಅಂತಾರಾಷ್ಟ್ರೀಯ ಬೆಲೆಗಳಲ್ಲಿನ ಇಳಿಕೆಗೆ ಅನುಗುಣವಾಗಿ ಪ್ರತಿ ತೈಲ ಬ್ರಾಂಡ್‌ನ ಎಂ ಆರ್ ಪಿ ಅನ್ನು ಕಡಿಮೆ ಮಾಡುವಂತೆ" ತಿಳಿಸಿದರು. ತೈಲ ಕಂಪನಿಗಳು ದರ ಕಡಿತಕ್ಕೆ ಒಪ್ಪಿಕೊಂಡಿವೆ.
"ಜಾಗತಿಕ ಬೆಲೆಗಳ ಕುಸಿತದ ಬೆನ್ನಲ್ಲೇ ಅಡುಗೆ ಎಣ್ಣೆಗಳ ಚಿಲ್ಲರೆ ಬೆಲೆಯಲ್ಲಿ ಮತ್ತಷ್ಟು ಕಡಿತ ಮಾಡುವ ಕುರಿತು ಚರ್ಚಿಸಲು ಸಾಲ್ವೆಂಟ್ ಎಕ್ಸ್‌ಟ್ರಾಕ್ಷನ್ ಅಸೋಸಿಯೇಷನ್ ಆಫ್ ಇಂಡಿಯಾ (ಎಸ್‌ಇಎಐ) ಮತ್ತು ಭಾರತೀಯ ತರಕಾರಿ ತೈಲ ಉತ್ಪಾದಕರ ಸಂಘದ (ಐವಿಪಿಎ) ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಈ ವೇಳೆ ಬೆಲೆ ಮಾಹಿತಿ ಸಂಗ್ರಹಣೆ ಮತ್ತು ಖಾದ್ಯ ತೈಲಗಳ ಪ್ಯಾಕೇಜಿಂಗ್‌ನಂತಹ ಇತರೆ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು" ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಅಡುಗೆ ಮಾಡುವಾಗ ಉಂಟಾಗುವ ಮಾಲಿನ್ಯದಿಂದ ಹೆಚ್ಚಿನ ಅಪಾಯ
ಕಳೆದ ಎರಡು ತಿಂಗಳುಗಳಲ್ಲಿ ವಿವಿಧ ಖಾದ್ಯ ತೈಲಗಳ ಜಾಗತಿಕ ಬೆಲೆಗಳು ಪ್ರತಿ ಟನ್‌ಗೆ $ 200-250 ರಷ್ಟು ಕುಸಿದಿದೆ. ಆದರೆ, ಚಿಲ್ಲರೆ ಮಾರುಕಟ್ಟೆಗಳಲ್ಲಿ ಈ ದರ ಕುಸಿತ ಅನ್ವಯವಾಗಲು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ, ಚಿಲ್ಲರೆ ಬೆಲೆಗಳು ಶೀಘ್ರದಲ್ಲೇ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಉದ್ಯಮ ಸಂಸ್ಥೆಗಳು ಮಾಹಿತಿ ನೀಡಿವೆ.
ಇದನ್ನೂ ಓದಿ : ಅಡುಗೆ ಎಣ್ಣೆ ದರದಲ್ಲಿ ಕುಸಿತ : ಪ್ರಮುಖ ಬ್ರಾಂಡ್ಗಳ ಬೆಲೆ 10-15 ರೂ. ಕಡಿತ
ಅಡುಗೆ ಎಣ್ಣೆಗಳ ಮೇಲಿನ ಎಂಆರ್‌ಪಿಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ತಿಳಿಸಿರುವುದಾಗಿ ಎಸ್‌ಇಎ ತಿಳಿಸಿದೆ. ಈ ಬಗ್ಗೆ ತನ್ನ ಸದಸ್ಯರಿಗೆ ತಿಳಿಸಲು ಮತ್ತು ದರಗಳಲ್ಲಿನ ಕಡಿತದ ಪ್ರಯೋಜನವನ್ನ ಜನಸಾಮಾನ್ಯರಿಗೆ ಕೂಡಲೇ ಸಿಗುವಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಅದು ಮಾಹಿತಿ ನೀಡಿದೆ.
ಇದನ್ನೂ ಓದಿ : ಗ್ರಾಹಕರಿಗೆ ಸಿಲಿಂಡರ್ ಪೂರೈಸುವಾಗ, ಹೆಚ್ಚುವರಿ ಡೆಲಿವರಿ ಚಾರ್ಜ್ ತಗೊಂಡ್ರೆ ಲೈಸೆನ್ಸ್ ರದ್ದು : ಡಿಸಿ ಎಚ್ಚರಿಕೆ