ವರಂಗಲ್: ಯಾವುದೇ ವೈದ್ಯಕೀಯ ಶಿಕ್ಷಣ ಪಡೆಯದೇ ಜನರಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದ ನಕಲಿ ಡಾಕ್ಟರ್ ಹಾಗೂ ಆತನ ಸಹಾಯಕನನ್ನು ವರಂಗಲ್ ಕಮಿಷನರೇಟ್ ಟಾಸ್ಕ್ ಫೋರ್ಸ್ ಪೊಲೀಸರು ಬಂಧಿಸಿದ್ದಾರೆ. ನಕಲಿ ಡಾಕ್ಟರ್ ಕಳೆದ 4 ವರ್ಷಗಳಿಂದ ದಿನಕ್ಕೆ 30 ರಿಂದ 40 ಜನರಂತೆ ಸುಮಾರು 43 ಸಾವಿರ ಜನರಿಗೆ ವೈದ್ಯಕೀಯ ಚಿಕಿತ್ಸೆ ನೀಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಆಯುಕ್ತ ತರುಣ್ ಜೋಶಿ ತಿಳಿಸಿದ್ದಾರೆ.
ಮುಜ್ತಬಾ ಅಹ್ಮದ್ ಎಂಬಾತನೇ ಬಂಧಿತ ನಕಲಿ ಡಾಕ್ಟರ್ ಆಗಿದ್ದಾನೆ. ವರಂಗಲ್ ನಗರದವನಾದ ಮುಜ್ತಬಾ ಫಾರ್ಮಸಿ ವ್ಯಾಸಂಗವನ್ನು ಅರ್ಧಕ್ಕೆ ತೊರೆದು ಸ್ಥಳೀಯ ವೈದ್ಯರ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ನಂತರ ಸುಲಭವಾಗಿ ಹಣ ಗಳಿಸುವುದಕ್ಕಾಗಿ ತಾನೇ ಡಾಕ್ಟರ್ ಎಂದು ಹೇಳಿಕೊಂಡು ಜನರಿಗೆ ಚಿಕಿತ್ಸೆ ನೀಡುತ್ತಿದ್ದಾನೆ.
ಏಮ್ಸ್ ನಲ್ಲಿ ಎಂಬಿಬಿಎಸ್ ಪಾಸ್ ಮಾಡಿರುದಾಗಿ ಈತ ನಕಲಿ ಪ್ರಮಾಣಪತ್ರವನ್ನು ಸೃಷ್ಟಿಸಿದ್ದ. ನಂತರ 2018 ರಲ್ಲಿ ವರಂಗಲ್‌ನ ಚಿಂತಲ್ ಪ್ರದೇಶದಲ್ಲಿ ಹೆಲ್ತ್‌ಕೇರ್ ಫಾರ್ಮಸಿ ಹೆಸರಿನಲ್ಲಿ ಆಸ್ಪತ್ರೆಯನ್ನು ಪ್ರಾರಂಭಿಸಿದ್ದ. ಇನ್ನು ದಾಮರಕೊಂಡ ಸಂತೋಷ್ ಎಂಬಾತ ಈತನ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಮುಜ್ತಬಾ ತಾನೊಬ್ಬ ನಿಜವಾದ ವೈದ್ಯ ಎಂದು ಜನರನ್ನು ನಂಬಿಸಿ ಚಿಕಿತ್ಸೆಗಾಗಿ ಅಪಾರ ಹಣ ವಸೂಲಿ ಮಾಡುತ್ತಿದ್ದ.
ಯಾವುದೇ ಅಗತ್ಯವಿಲ್ಲದಿದ್ದರೂ ಚಿತ್ರ ವಿಚಿತ್ರ ಮೆಡಿಕಲ್ ಟೆಸ್ಟ್ಗಳನ್ನು ಮಾಡಿಸುವಂತೆ ರೋಗಿಗಳಿಗೆ ಬರೆದು ಕೊಡುತ್ತಿದ್ದ. ಚಿಕ್ಕ ಪುಟ್ಟ ಕಾಯಿಲೆಗಳಿದ್ದರೂ ಜನರಿಗೆ ಯಾವುದೋ ದೊಡ್ಡ ಕಾಯಿಲೆ ಬಂದಿದೆ ಎಂದು ಹೆದರಿಸಿ ದೊಡ್ಡ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದ. ಹೀಗೆ ಮಾಡಿ ಸಾಕಷ್ಟು ಕಮಿಷನ್ಗಳಿಸುವುದು ಈತನ ಉದ್ದೇಶವಾಗಿತ್ತು.
ನಕಲಿ ವೈದ್ಯನ ಬಗ್ಗೆ ಮಾಹಿತಿ ಪಡೆದ ಟಾಸ್ಕ್ ಪೋರ್ಸ್ ಪೊಲೀಸರು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ್ದಾರೆ. ನಕಲಿ ವೈದ್ಯಕೀಯ ಪ್ರಮಾಣ ಪತ್ರಗಳ ಜೊತೆಗೆ 1.90 ಲಕ್ಷ ರೂಪಾಯಿ ನಗದು, ಲ್ಯಾಪ್‌ಟಾಪ್, ಮೂರು ಸೆಲ್ ಫೋನ್‌ಗಳು ಮತ್ತು ಲ್ಯಾಬ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಇದನ್ನು ಓದಿ:ಕೆಲ ಮಾನಸಿಕ ಒತ್ತಡಗಳು ಆರೋಗ್ಯಕ್ಕೆ ಉತ್ತಮವಂತೆ: ಅವು ಯಾವುವು ಗೊತ್ತೆ?