ಚೆನ್ನೈ: ತಮಿಳುನಾಡಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದಿರುವ ಬಿಜೆಪಿ, ಅಂದಿನ ಪಕ್ಷದ ರಾಜ್ಯಾಧ್ಯಕ್ಷ ಎಲ್. ಮುರುಗನ್ ಅವರಿಗೆ ಮೋದಿ ಸಂಪುಟದಲ್ಲಿ ರಾಜ್ಯ ಸಚಿವ ಸ್ಥಾನವನ್ನು ನೀಡಿ ಪುರಸ್ಕರಿಸಿದೆ. ಆದರೆ ದ್ರಾವಿಡ ಹೃದಯಭೂಮಿಯಲ್ಲಿ ಛಾಪು ಮೂಡಿಸಲು ಯತ್ನಿಸುತ್ತಿರುವ ರಾಜ್ಯ ಬಿಜೆಪಿಯಲ್ಲಿ ಈಗ ಆಂತರಿಕ ತಿಕ್ಕಾಟ, ಬಣ ರಾಜಕೀಯ ಆರಂಭವಾಗಿದೆ.
ಮುಂಚೆ ಐಪಿಎಸ್ ಅಧಿಕಾರಿ ಆಗಿದ್ದು ನಂತರ ರಾಜಕಾರಣಕ್ಕೆ ಬಂದ ಕೆ. ಅಣ್ಣಾಮಲೈ ಅವರು ಪಕ್ಷದೊಳಗೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆಂದು ಆರೋಪಿಸಲಾಗುತ್ತಿದೆ. ಪಕ್ಷದ ಮಹಿಳಾ ನಾಯಕಿ ಗಾಯತ್ರಿ ರಘುರಾಮನ್ ಅವರನ್ನು ಪಕ್ಷದಿಂದ ಆರು ತಿಂಗಳ ಅವಧಿಗೆ ಉಚ್ಚಾಟಿಸಿದ ನಂತರ ಪಕ್ಷದ ಅಧ್ಯಕ್ಷ ಅಣ್ಣಾಮಲೈ ವಿರುದ್ಧದ ಕೂಗು ಬಲವಾಗುತ್ತಿದೆ.
ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ನಾಯಕಿ ಡೈಸಿ ಸರೀನ್ ಅವರನ್ನು ಮತ್ತೊಬ್ಬ ನಾಯಕ, ದಲಿತ ಮುಖಂಡ ಶಿವ ಸೂರ್ಯ ಮತ್ತು ಅವರ ಮಗ ನಿಂದಿಸಿದ್ದರು. ಈ ಸಂದರ್ಭದಲ್ಲಿ ಗಾಯತ್ರಿ ರಘುರಾಮನ್ ಡೈಸಿ ಪರವಾಗಿ ನಿಂತಿದ್ದರು.
ಡೈಸಿ ಸರೀನ್ ಅವರನ್ನು ಶಿವ ಸೂರ್ಯ ಅವರು ಅವಾಚ್ಯವಾಗಿ ನಿಂದಿಸುವ ವಿಡಿಯೊ ವೈರಲ್ ಆಗಿತ್ತು. ಆಗ ಗಾಯತ್ರಿ ರಘುರಾಮನ್ ಡೈಸಿ ಬೆಂಬಲಕ್ಕೆ ನಿಂತಿದ್ದರು. ಈ ಬಗ್ಗೆ ಗಾಯತ್ರಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿ, ಪಕ್ಷದ ಇಂಡಸ್ಟ್ರಿಯಲ್ ಸೆಲ್ ಸಂಯೋಜಕ ಎ. ಸೆಲ್ವಕುಮಾರ್ ಅವರೊಂದಿಗೆ ವಾಗ್ವಾದ ನಡೆಸಿದ್ದರು. ತನ್ನ ವಿರುದ್ಧ ನಡೆಯುತ್ತಿರುವ ಟ್ರೋಲಿಂಗ್ಗೆ ಸೆಲ್ವಕುಮಾರ್ ಅವರೇ ಕಾರಣ ಅಂತ ಗಾಯತ್ರಿ ಆರೋಪಿಸಿದ್ದರು.
ಇದಾದ ತಕ್ಷಣ ಗಾಯತ್ರಿ ಅವರನ್ನು ಪಕ್ಷದಿಂದ 6 ತಿಂಗಳು ಕಾಲ ಅಮಾನತು ಮಾಡಿ ಅಧ್ಯಕ್ಷ ಅಣ್ಣಾಮಲೈ ಆದೇಶ ಹೊರಡಿಸಿದ್ದರು. ಅಲ್ಲದೆ ತದನಂತರ ಓಬಿಸಿ ಮೋರ್ಚಾ ಮುಖ್ಯಸ್ಥ ಶಿವ ಸೂರ್ಯ ಅವರನ್ನೂ ಪಕ್ಷದಿಂದ ಅಮಾನತು ಮಾಡಲಾಯಿತು.
ಅಣ್ಣಾಮಲೈ ಇಬ್ಬರು ಕಿರಿಯ ಹಂತದ ನಾಯಕರನ್ನು ಅಮಾನತು ಮಾಡಿದ ಕ್ರಮವನ್ನು ಸರ್ವಾಧಿಕಾರಿ ಧೋರಣೆ ಎಂದು ಕೆಲವರು ಆರೋಪಿಸಿದ್ದು, ಮೇಲ್ನೋಟಕ್ಕೆ ಕಾಣದ ಸಂಗತಿಗಳು ಇದರಲ್ಲಿವೆ ಎನ್ನಲಾಗಿದೆ. ಅಣ್ಣಾಮಲೈ ಪಕ್ಷದ ಅಧ್ಯಕ್ಷರಾದ ನಂತರ ತಮ್ಮ ದಿಟ್ಟ ನಿರ್ಧಾರ ಕೈಗೊಳ್ಳುವ ಇರಾದೆಯನ್ನು ತೋರ್ಪಡಿಸಿದ್ದಾರೆ ಮತ್ತು ಹಿಂದಿನಂತೆ ರಾಜಕೀಯದಲ್ಲಿ ಆರಾಮವಾಗಿರುವ ಸಂಪ್ರದಾಯಕ್ಕೆ ಕೊನೆ ಹಾಡಿದ್ದಾರೆ.
ಹೊಸ ಪೀಳಿಗೆಯ ನಾಯಕರಾದ ಅಣ್ಣಾಮಲೈ ಅವರ ಕಾರ್ಯವೈಖರಿಯನ್ನು ಒಪ್ಪಿಕೊಳ್ಳದ ಅನೇಕ ಹಿರಿಯ ಮುಖಂಡರು ಅವರ ವಿರುದ್ಧ ಪಕ್ಷದಲ್ಲಿ ಬಂಡಾಯ ಏಳುವಂತೆ ಮಾಡುತ್ತಿದ್ದಾರೆ ಮತ್ತು ಇದೇ ಸಮಯದಲ್ಲಿ ಅಣ್ಣಾಮಲೈ ಅವರಿಗೆ ಪಕ್ಷದಲ್ಲಿ ವಿರೋಧಿಗಳು ಹೆಚ್ಚಾಗುತ್ತಿದ್ದಾರೆ.