ನವದೆಹಲಿ: ಬ್ಯಾಂಕ್ಗಳಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಮತ್ತು ವಜ್ರೋದ್ಯಮಿ ನೀರವ್ ಮೋದಿ ಹಸ್ತಾಂತರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ನಡುವೆ ನಡೆದ ವರ್ಚುವಲ್ ಸಭೆಯಲ್ಲಿ ಪ್ರಸ್ತಾಪವಾಯಿತು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ನಡುವೆ ನಡೆದ ವರ್ಚುವಲ್ ಸಭೆಯಲ್ಲಿ, ವಿಚಾರಣೆಗಾಗಿ ಆದಷ್ಟು ಬೇಗ ಹಣಕಾಸು ವಂಚಕರನ್ನು ನಮ್ಮ ದೇಶಕ್ಕೆ ಕಳುಹಿಸಿ ಎಂದು ಪ್ರಧಾನಿ ಒತ್ತಾಯಿಸಿದರು.
ವರ್ಚುವಲ್ ಸಭೆಯ ಕುರಿತು ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂದೀಪ್ ಚಕ್ರವರ್ತಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಸಭೆಯಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ಮಹತ್ವದ ಚರ್ಚೆ ನಡೆಯಿತು. ಜೊತೆಗೆ ಉದ್ಯಮಿ ವಿಜಯ್ ಮಲ್ಯ, ನೀರವ್ ಮೋದಿ ಹಸ್ತಾಂತರದ ಪ್ರಸ್ತಾಪ ಸಭೆಯಲ್ಲಿ ಆಯಿತು. ಹಣಕಾಸು ವಂಚಕರನ್ನು ಶೀಘ್ರವೇ ಹಸ್ತಾಂತರಿಸಲು ಕ್ರಮ ಕೈಗೊಳ್ಳಿ ಎಂದು ಪ್ರಧಾನಿ ಮೋದಿ ಹೇಳಿದರು ಎಂದು ಸಂದೀಪ್ ಚಕ್ರವರ್ತಿ ವಿವರಿಸಿದರು.
ಯುಕೆಯಲ್ಲಿರುವ ಕಾನೂನು ವ್ಯವಸ್ಥೆಯ ಸ್ವರೂಪದಿಂದಾಗಿ ಕೆಲ ಕಾನೂನು ತೊಡಕುಗಳನ್ನು ಎದುರಿಸುತ್ತಿದ್ದೇವೆ. ಆದ್ರೆ ಸಾಧ್ಯವಾದಷ್ಟು ಬೇಗ ಹಣಕಾಸು ವಂಚಕರನ್ನು ಹಸ್ತಾಂತರಿಸಲು ಕ್ರಮ ಕೈಗೊಳ್ಳುವುದಾಗಿ ಬ್ರಿಟನ್ ಪಿಎಂ ಜಾನ್ಸ್ನ್ ಭರವಸೆ ನೀಡಿದರು ಎಂದು ಸಂದೀಪ್ ಚಕ್ರವರ್ತಿ ತಿಳಿಸಿದ್ದಾರೆ.