ಪ್ರಜಾಪ್ರಭುತ್ವದ ದೇಗುಲ ಎಂದೇ ಕರೆಯಲಾಗುವ ಹೊಸ ಸಂಸತ್ ಭವನ ಉದ್ಘಾಟನೆ ಅದೆಷ್ಟು ಸುದ್ದಿ ಮಾಡಿದೆಯೋ, ಅಷ್ಟೇ ತೂಕದಲ್ಲಿ 'ಸೆಂಗೋಲ್' ಎಂಬ ರಾಜದಂಡವೂ ಸದ್ದು ಮಾಡಿದೆ. ಇಂದು ಧಾರ್ಮಿಕ ವಿಧಿವಿಧಾನಗಳ ಬಳಿಕ ತಮಿಳುನಾಡಿನ ಅಧೀನಂಗಳಿಂದ ಪಡೆದುಕೊಂಡ ಸೆಂಗೋಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯ ಸ್ಪೀಕರ್ ಪೀಠದ ಬಲಭಾಗದಲ್ಲಿನ ವಿಶೇಷ ಜಾಗದಲ್ಲಿ ಪ್ರತಿಷ್ಠಾಪಿಸಿದರು. ಪವಿತ್ರ ರಾಜದಂಡ ವರ್ಗಾವಣೆಯು ಚೋಳರ ಕಾಲದಿಂದಲೂ ನಡೆದುಕೊಂಡು ಬಂದಿದೆ.
ಈಗ ಅಳವಡಿಸಲಾಗಿರುವ ಸೆಂಗೋಲ್ ರಾಜದಂಡವನ್ನು ಬ್ರಿಟಿಷರು ನೀಡಿದ್ದರು ಎಂಬುದು ಇತಿಹಾಸದ ಪುಟದಲ್ಲಿದೆ. ನಮ್ಮ ದೇಶ ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿ ಸ್ವತಂತ್ರಗೊಂಡಾಗ ಅದನ್ನು ಭಾರತೀಯರಿಗೆ ಅಧಿಕಾರದ ವರ್ಗಾವಣೆಯ ದ್ಯೋತಕವಾಗಿ ನೀಡಲಾಗಿತ್ತು.
ಏನಿದು ಸೆಂಗೋಲ್ ರಾಜದಂಡ?: ರಾಜದಂಡಕ್ಕೆ ಕರೆಯಲಾಗುವ ಸೆಂಗೋಲ್ ಎಂಬುದು ತಮಿಳು ಪದ. ಮಧ್ಯಕಾಲೀನ ಮತ್ತು ಪೂರ್ವ ಮಧ್ಯಕಾಲೀನ ಕಾಲದಲ್ಲಿ ರಾಜರ ಪಟ್ಟಾಭಿಷೇಕದ ಸಮಯದಲ್ಲಿ ಇದನ್ನು ಬಳಸಲಾಗುತ್ತಿತ್ತು. 1947 ರಲ್ಲಿ ಭಾರತ ಸ್ವತಂತ್ರವಾದ ಬಳಿಕ ಅಧಿಕಾರದ ಹಸ್ತಾಂತರದ ರೂಪದಲ್ಲಿ ಬ್ರಿಟಿಷ್ ವೈಸ್ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ಸೆಂಗೋಲ್ ಅನ್ನು ಭಾರತೀಯರಿಗೆ ವರ್ಗಾಯಿಸಿದ್ದರು. ಇದನ್ನು ಅಲಹಾಬಾದ್ನ ವಸ್ತು ಸಂಗ್ರಹಾಲಯದಲ್ಲಿ ಈವರೆಗೂ ಇರಿಸಲಾಗಿತ್ತು.
ನೆಹರೂಗೆ ಹಸ್ತಾಂತರಿಸಿದ್ದ ಬ್ಯಾಟನ್: ಸಂಗಮ ಯುಗದಲ್ಲಿ ಮತ್ತು ಮಧ್ಯಕಾಲೀನ ಯುಗದ ಚೋಳರ ಅವಧಿಯಲ್ಲಿ ಸೆಂಗೋಲ್ ಹಸ್ತಾಂತರ ಅಸ್ತಿತ್ವದಲ್ಲಿತ್ತು ಎಂದು ಐತಿಹಾಸಿಕ ಪುರಾವೆಗಳು ಹೇಳುತ್ತವೆ. ಅದೇ ರೀತಿ, 1947 ರ ಆಗಸ್ಟ್ 14 ರಂದು ಮಧ್ಯರಾತ್ರಿ ಭಾರತಕ್ಕೆ ಬ್ರಿಟಿಷರು ಸ್ವಾತಂತ್ರ್ಯ ಘೋಷಿಸಿದರು. ಲಾರ್ಡ್ ಮೌಂಟ್ ಬ್ಯಾಟನ್ ಅವರು ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರಿಗೆ ಈ ಸೆಂಗೋಲ್ ಹಸ್ತಾಂತರ ಮಾಡಿದರು.
ರಾಜದಂಡವನ್ನು ಗಂಗಾ ನದಿಯಿಂದ ತಂದಿದ್ದ ಪವಿತ್ರ ಜಲದಿಂದ ಶುದ್ಧೀಕರಿಸಲಾಗಿತ್ತು. ಮೆರವಣಿಗೆಯ ಮೂಲಕ ಅದನ್ನು ನೆಹರೂ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿತ್ತು. ಅಲ್ಲಿ ಅದನ್ನು ಅವರಿಗೆ ಹಸ್ತಾಂತರ ಮಾಡಲಾಗಿತ್ತು. ಇದು ಬ್ರಿಟಿಷರಿಂದ ಭಾರತೀಯ ಜನರಿಗೆ ಅಧಿಕಾರದ ವರ್ಗಾವಣೆಯ ಸಂಕೇತವಾಗಿ ನೀಡಲಾಗಿತ್ತು. ತಮಿಳುನಾಡಿನ ಸಿ.ರಾಜಗೋಪಾಲಾಚಾರಿ (ರಾಜಾಜಿ) ಅವರು ರಾಜದಂಡ ಹಸ್ತಾಂತರ ಸಲಹೆ ನೀಡಿದ್ದರು.
ವಿವಾದವೇನು?: ಅಧಿಕಾರ ಹಸ್ತಾಂತರದ ದ್ಯೋತಕವಾದ ಸೆಂಗೋಲ್ ಈಗ ವಿವಾದಕ್ಕೀಡಾಗಿದೆ. ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆಯನ್ನು ಕೆಲವು ವಿರೋಧ ಪಕ್ಷಗಳು ಬಹಿಷ್ಕರಿಸಿದ್ದಲ್ಲದೇ, ಸೆಂಗೋಲ್ ರಾಜದಂಡ ಕಲ್ಪಿತ ಮತ್ತು ಇತಿಹಾಸದಲ್ಲಿ ಇದರ ಪ್ರಸ್ತಾಪವೇ ಇಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ.
ಭಾರತದ ಸ್ವಾತಂತ್ರ್ಯಾ ಮುನ್ನಾದಿನದಂದು ನೆಹರೂ ಅವರಿಗೆ ಬ್ರಿಟಿಷರು ಸೆಂಗೋಲ್ ಅನ್ನು ಹಸ್ತಾಂತರಿಸಿದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಪ್ರತಿಪಾದಿಸಿದ್ದರು. ರಾಜದಂಡಕ್ಕೆ ಸಂಬಂಧಿಸಿದಂತೆ ಮೌಂಟ್ ಬ್ಯಾಟನ್, ರಾಜಾಜಿ ಮತ್ತು ನೆಹರೂ ಅವರ ಪ್ರಸ್ತಾಪವೇ ಆಧಾರರಹಿತವೆಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ, ಬಿಜೆಪಿಯ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಪಕ್ಷಗಳ ಟೀಕೆಗಳನ್ನು ನಾಚಿಕೆಗೇಡಿನ ಸಂಗತಿ ಎಂದು ಅಣಕವಾಡಿದ್ದರು. ಇದು ಭಾರತದ ಸಂಸ್ಕೃತಿಗೆ ಮಾಡಿದ ಅವಮಾನ. ಅಧೀನಂ ಆಚಾರ್ಯರು ನೀಡಿದ ರಾಜದಂಡವನ್ನು ವಾಕಿಂಗ್ ಸ್ಟಿಕ್ ಎಂದು ಹೇಳಿದ್ದಕ್ಕೆ ಕಿಡಿಕಾರಿದ್ದರು.
ಸೆಂಗೋಲ್ಗೆ ರಾಜಕೀಯ ಬಣ್ಣ: ಸ್ಪೀಕರ್ ಕುರ್ಚಿಯ ಪಕ್ಕದಲ್ಲಿ ಸೆಂಗೋಲ್ ಅನ್ನು ಇರಿಸುವ ಸರ್ಕಾರದ ನಿರ್ಧಾರವು ಮಹತ್ವದ್ದಾಗಿದ್ದರೂ, ಅದೀಗ ರಾಜಕೀಯ ಬಣ್ಣ ಪಡೆದುಕೊಂಡಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ ತಮಿಳುನಾಡಿನಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಲು ಬಿಜೆಪಿಯ ಪ್ರಯತ್ನವಿದು ಎಂದು ಆರೋಪಿಸಲಾಗಿದೆ. ಕಾಶಿ-ತಮಿಳು ಸಂಗಮ ಕಾರ್ಯಕ್ರಮದ ಮುಂದುವರಿಕೆಯ ಭಾಗವಿದು ಎಂದು ಹೇಳಲಾಗಿದೆ.
ಇದನ್ನೂ ಓದಿ: ಹೊಸ ಸಂಸತ್ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ, ಸ್ಪೀಕರ್ ಪೀಠದ ಬಳಿ ಸೆಂಗೋಲ್ ಪ್ರತಿಷ್ಠಾಪನೆ