ನವದೆಹಲಿ: ಧರ್ಮ ಮತ್ತು ನಂಬಿಕೆಯ ಹೊರತಾಗಿ ತಮ್ಮಿಚ್ಛೆಗೆ ಅನುಸಾರವಾಗಿ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ದೆಹಲಿ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಮದುವೆಯ ಹಕ್ಕು ಪ್ರತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯ. ವಯಸ್ಕರ ಮದುವೆ ವಿಚಾರದಲ್ಲಿ ನಿರ್ದೇಶಿಸುವ ಹಕ್ಕು ಪೋಷಕರು, ಸಮಾಜ ಹಾಗು ರಾಜ್ಯಕ್ಕೂ ಇಲ್ಲ ಎಂದು ತಿಳಿಸಿದೆ.
ಮದುವೆಯ ವಿಚಾರದಲ್ಲಿ ಹುಡುಗಿಯ ಕುಟುಂಬ ಬೆದರಿಕೆ ಹಾಕುತ್ತಿದ್ದು, ರಕ್ಷಣೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸೌರಭ್ ಬ್ಯಾನರ್ಜಿ ಅವರಿದ್ಧ ನ್ಯಾಯಪೀಠ ಈ ರೀತಿ ಅಭಿಪ್ರಾಯಪಟ್ಟಿತು. ಅಲ್ಲದೇ, ಜೋಡಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಸೂಚಿಸಿದೆ.
ಕಾನೂನುಬದ್ದ ವಯೋಮಿತಿ ದಾಟಿರುವ ವಯಸ್ಕ ಜೋಡಿ ಪೋಷಕರ ಇಚ್ಛೆಗೆ ವಿರುದ್ಧವಾಗಿ ವಿಶೇಷ ಮದುವೆಯ ಹಕ್ಕು 1954 ಅಡಿ ವಿವಾಹವಾಗಿದ್ದಾರೆ. ಆದರೆ, ಈ ಮದುವೆಗೆ ಯುವತಿಯ ಮನೆಯವರಿಂದ ಭಾರಿ ವಿರೋಧ ವ್ಯಕ್ತವಾಗಿದ್ದು, ನ್ಯಾಯಾಲಯದ ಮೊರೆ ಹೋಗಿದ್ದರು.
ಯಾವುದೇ ವ್ಯಕ್ತಿಯನ್ನು ತನ್ನ ಇಚ್ಛೆಗೆ ಅನುಗುಣವಾಗಿ ಮದುವೆಯಾಗುವ ಹಕ್ಕನ್ನು ಸಂವಿಧಾನದ 21ನೇ ವಿಧಿ ನೀಡಿದೆ. ಈ ವಿಧಿಯು ತಮ್ಮ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅನುಗುಣವಾಗಿ ಜೀವಿಸುವ ಹಕ್ಕು ಕೊಟ್ಟಿದೆ. ಅಲ್ಲದೆ, ವ್ಯಕ್ತಿಯ ಆಯ್ಕೆ, ಅದರಲ್ಲೂ ವಿಶೇಷವಾಗಿ ಮದುವೆ ವಿಚಾರದ ಆಯ್ಕೆಯನ್ನು ಸಂರಕ್ಷಿಸಲಾಗಿದೆ ಎಂದರು.
ಇಬ್ಬರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಜೀವಕ್ಕೆ ಯುವತಿಯ ಕುಟುಂಬಸ್ಥರು ಬೆದರಿಕೆ ಹಾಕುವಂತಿಲ್ಲ. ಅವರ ವೈಯಕ್ತಿಕ ನಿರ್ಧಾರ ಮತ್ತು ಆಯ್ಕೆಗೆ ಸಮಾಜದ ಒಪ್ಪಿಗೆಯ ಅವಶ್ಯಕತೆಯೂ ಇಲ್ಲ ಎಂದು ಇದೇ ವೇಳೆ ನ್ಯಾ.ಬ್ಯಾನರ್ಜಿ ಒತ್ತಿ ಹೇಳಿದರು. ಯುವಕ ಮತ್ತು ಯುವತಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದು, ಬೀಟ್ ಕಾನ್ಸ್ಟೇಬಲ್ ಮತ್ತು ಎಸ್ಎಚ್ಒಗೆ ಮಾಹಿತಿ ನೀಡುವಂತೆ ಹೇಳಿದರು.
ಅಂತರಧರ್ಮೀಯ ಜೋಡಿಗೆ ಥಳಿತ: ಉತ್ತರ ಪ್ರದೇಶದಲ್ಲಿ ಅಂತರಧರ್ಮೀಯ ಮದುವೆಯಾದ ಜೋಡಿಗೆ ಸ್ಥಳೀಯರು ಅಮಾನುಷವಾಗಿ ಹಲ್ಲೆ ನಡೆಸಿರುವ ಪ್ರಕರಣ ನಡೆದಿದೆ. ಹಲ್ಲೆಗೊಳಗಾದ ಯುವಕ ಲವ್ ಜಿಹಾದ್ನಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ನಾಪತ್ತೆಯಾದ ತಂಗಿಗಾಗಿ ಯುವಕ ದೇವಸ್ಥಾನ ಮುಂದೆ, ಮುಸ್ಲಿಮರಿಗೆ ಪ್ರವೇಶ ಇಲ್ಲ ಎಂಬ ಬೋರ್ಡ್ ಪರಿಗಣಿಸದೆ ಒಳಹೋಗಿದ್ದಾನೆ. ಸ್ನೇಹಿತೆಯ ಜೊತೆ ದೇವಸ್ಥಾನಕ್ಕೆ ನುಗ್ಗಿದ ಯುವಕ ಮತ್ತು ಆತನ ತಂಗಿಯ ಮೇಲೆ ಹಲ್ಲೆ ನಡೆಸಲಾಗಿದೆ.
ಶನಿವಾರ ಈ ಪ್ರಕರಣ ನಡೆದಿದ್ದು, ಸೋಮವಾರ ಬೆಳಕಿಗೆ ಬಂದಿದೆ. ಈ ಮೂವರು ದೇವಸ್ಥಾನದ ಬಳಿಯ ನಿವಾಸಿಗಳಾಗಿದ್ದು, ನೆರೆ ಹೊರೆಯಾವರಾಗಿದ್ದರು. ಹಲ್ಲೆಯ ದೃಶ್ಯಗಳು ವೈರಲ್ ಆಗಿವೆ. ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಜಮ್ಮು ಕಾಶ್ಮೀರ: ಎನ್ಕೌಂಟರ್ ವೇಳೆ ನಾಪತ್ತೆಯಾಗಿದ್ದ ಯೋಧ ಶವವಾಗಿ ಪತ್ತೆ