ನವದೆಹಲಿ: ಮಹತ್ವದ ತೀರ್ಪೊಂದರಲ್ಲಿ ಸುಪ್ರೀಂಕೋರ್ಟ್ ದೇಶದಲ್ಲಿ ನಡೆಯುವ ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಿದೆ. ಇದರಲ್ಲಿ ಪೊಲೀಸರು ಮಧ್ಯಪ್ರವೇಶಿಸುವಂತಿಲ್ಲ ಅಥವಾ ಒಪ್ಪಿಗೆಯೊಂದಿಗೆ ಈ ಕೆಲಸ ಮಾಡುವ ಲೈಂಗಿಕ ಕಾರ್ಯಕರ್ತೆಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಆರು ಅಂಶಗಳ ಮಾರ್ಗಸೂಚಿ ಬಿಡುಗಡೆ: ಲೈಂಗಿಕ ಕಾರ್ಯಕರ್ತೆಯರು ಕಾನೂನಿನ ಮುಂದೆ ಗೌರವ ಮತ್ತು ಸಮಾನತೆಗೆ ಅರ್ಹರು ಎಂದು ಸುಪ್ರೀಂ ಹೇಳಿದೆ. ಇನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಲ್. ನಾಗೇಶ್ವರರಾವ್ ಅವರಿದ್ದ ತ್ರಿಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ. ಪೀಠವು ಲೈಂಗಿಕ ಕಾರ್ಯಕರ್ತೆಯರ ಹಕ್ಕುಗಳನ್ನು ರಕ್ಷಿಸಲು ಆರು ಅಂಶಗಳ ಮಾರ್ಗಸೂಚಿಗಳನ್ನು ಸಹ ಹೊರಡಿಸಿದೆ. ಈ ಶಿಫಾರಸುಗಳ ಮುಂದಿನ ವಿಚಾರಣೆಯನ್ನು ಜುಲೈ 27 ಎಂದು ನ್ಯಾಯಾಲಯ ನಿಗದಿಪಡಿಸಿದೆ. ಇವುಗಳ ಬಗ್ಗೆ ಪ್ರತ್ಯುತ್ತರ ನೀಡುವಂತೆ ಕೇಂದ್ರಕ್ಕೆ ಸೂಚಿಸಲಾಗಿದೆ.
ವೇಶ್ಯಾವಾಟಿಕೆ ಕಾನೂನು ಬಾಹಿರವಲ್ಲ: ಸ್ವಯಂ ಪ್ರೇರಿತ ವೇಶ್ಯಾವಾಟಿಕೆ ಕಾನೂನುಬಾಹಿರವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ವೇಶ್ಯಾಗೃಹ ನಡೆಸುವುದು ಕಾನೂನು ಬಾಹಿರ. ದೂರು ದಾಖಲಿಸುವ ಲೈಂಗಿಕ ಕಾರ್ಯಕರ್ತೆಯರ ವಿರುದ್ಧ ಪೊಲೀಸರು ತಾರತಮ್ಯ ಮಾಡಬಾರದು ಎಂದು ಸುಪ್ರೀಂಕೋರ್ಟ್ ಇದೇ ವೇಳೆ ಆದೇಶವನ್ನೂ ನೀಡಿದೆ.
ಸಂತ್ರಸ್ತೆ ವಿರುದ್ಧ ಎಸಗಿರುವ ಅಪರಾಧವು ಲೈಂಗಿಕ ಸ್ವರೂಪದ್ದಾಗಿದ್ದರೆ, ತಕ್ಷಣವೇ ವೈದ್ಯಕೀಯ ಮತ್ತು ಕಾನೂನು ನೆರವು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು. ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಪೊಲೀಸರ ವರ್ತನೆ ಸಾಮಾನ್ಯವಾಗಿ ಕ್ರೂರ ಮತ್ತು ಹಿಂಸಾತ್ಮಕವಾಗಿರುತ್ತದೆ ಎಂದು ನ್ಯಾಯಾಲಯ ಗಮನಿಸಿದೆ. ಆದ್ದರಿಂದ ಅವರ ವಿಷಯಗಳಲ್ಲಿ ಸೂಕ್ಷ್ಮ ಮನೋಭಾವವನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದೂ ಇದೇ ವೇಳೆ ಒತ್ತಿ ಹೇಳಿದೆ.
ಗುರುತು ಬಹಿರಂಗಪಡಿಸಬಾರದು : ಆರೋಪಿಗಳ ಗುರುತು ಬಹಿರಂಗಪಡಿಸದಂತೆ ಮಾಧ್ಯಮಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಬಂಧನಗಳು, ದಾಳಿಗಳು ಮತ್ತು ರಕ್ಷಣಾ ಕಾರ್ಯಾಚರಣೆಗಳ ಸಮಯದಲ್ಲಿ ಲೈಂಗಿಕ ಕಾರ್ಯಕರ್ತೆಯರ ಗುರುತನ್ನು ಪೊಲೀಸರು ಬಹಿರಂಗಪಡಿಸಬಾರದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಸಂತ್ರಸ್ತೆಯಾಗಿರಲಿ ಅಥವಾ ಆರೋಪಿಯಾಗಿರಲಿ. ಅವರ ಗುರುತನ್ನು ಬಹಿರಂಗಪಡಿಸುವ ಯಾವುದೇ ಛಾಯಾಚಿತ್ರವನ್ನು ಪ್ರಕಟಿಸಬಾರದು ಅಥವಾ ಪ್ರಸಾರ ಮಾಡಬಾರದು ಎಂದು ಹೇಳಿದೆ.
ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸಬಾರದು: ಲೈಂಗಿಕ ಕಾರ್ಯಕರ್ತರು ಕಾನೂನಿನ ಅಡಿ ಸಮಾನ ರಕ್ಷಣೆಗೆ ಅರ್ಹರಾಗಿರುತ್ತಾರೆ. ಕ್ರಿಮಿನಲ್ ಕಾನೂನು ವಯಸ್ಸು ಮತ್ತು ಒಪ್ಪಿಗೆಯ ಆಧಾರದ ಮೇಲೆ ಎಲ್ಲ ಪ್ರಕರಣಗಳಿಗೆ ಸಮಾನವಾಗಿ ಅನ್ವಯಿಸಬೇಕು. ಲೈಂಗಿಕ ಕಾರ್ಯಕರ್ತೆ ವಯಸ್ಕ ಮತ್ತು ಸಮ್ಮತಿಯೊಂದಿಗೆ ಉದ್ಯೋಗದಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದು ಸ್ಪಷ್ಟವಾದರೆ ಪೊಲೀಸರು ಹಸ್ತಕ್ಷೇಪ ಮಾಡಬಾರದು. ಸಂವಿಧಾನದ 21ನೇ ಪರಿಚ್ಛೇದದ ಅಡಿ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಗೌರವಯುತ ಜೀವನ ನಡೆಸುವ ಹಕ್ಕಿದೆ. ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸಬಾರದು ಅಥವಾ ಶಿಕ್ಷಿಸಬಾರದು. ವೇಶ್ಯಾಗೃಹಗಳ ಮೇಲೆ ದಾಳಿ ಮಾಡುವಾಗ ಅವರಿಗೆ ಕಿರುಕುಳ ನೀಡಬಾರದು ಎಂದು ತನ್ನ ಆದೇಶದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಸೂಚನೆ ನೀಡಿದೆ.
ಪ್ರಮುಖವಾಗಿ ಆದೇಶದಲ್ಲಿ ಲೈಂಗಿಕ ಕಾರ್ಯಕರ್ತೆಯರು ಮಗು ಹೊಂದಿದ್ದರೆ, ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಕಾರಣಕ್ಕೆ ತಾಯಿಯಿಂದ ಬೇರ್ಪಡಿಸಬಾರದು ಎಂದೂ ಸುಪ್ರೀಂ ಆದೇಶಿಸಿದೆ. ಸಭ್ಯತೆ ಮತ್ತು ಘನತೆಯ ಮೂಲಭೂತ ರಕ್ಷಣೆಯು ಲೈಂಗಿಕ ಕಾರ್ಯಕರ್ತರು ಮತ್ತು ಅವರ ಮಕ್ಕಳಿಗೂ ಸಹ ಅನ್ವಯವಾಗುತ್ತದೆ ಎಂದು ಇದೇ ವೇಳೆ ಸುಪ್ರೀಂ ತನ್ನ ತೀರ್ಪಿನಲ್ಲಿ ಹೇಳಿದೆ.
ಇದನ್ನೂ ಓದಿ: ಉಡುಪಿ: ಕಟ್ಟೆ ಭೋಜಣ್ಣ ಆತ್ಮಹತ್ಯೆ ಹಿಂದಿದೆ ₹9 ಕೋಟಿ ಸಾಲದ ಕಥೆ.. ಡೆತ್ನೋಟ್ನಲ್ಲಿ ಬಹಿರಂಗ