ಹೈದರಾಬಾದ್: ಇಂದು ಮಹಾತ್ಮ ಗಾಂಧೀಜಿ ಅವರ 152 ನೇ ಜಯಂತಿ. ಇಡೀ ರಾಷ್ಟ್ರವೇ ಬಾಪೂಜಿಯ ಜನ್ಮದಿನವನ್ನು ವಿಭಿನ್ನ ಹಾಗೂ ವಿಶೇಷವಾಗಿ ಆಚರಿಸುತ್ತಿದೆ. ಗಾಂಧಿ ಅವರ ನೆಚ್ಚಿನ 'ವೈಷ್ಣವ ಜನತೋ' ಸ್ತೋತ್ರವನ್ನು ದೇಶದ ಎಲ್ಲ ಭಾಷೆಗಳ ಗಾಯಕರ ಕಂಠಸಿರಿಯಿಂದ ಹೊರಹೊಮ್ಮಿಸುವ ಪ್ರಯತ್ನವನ್ನು ರಾಮೋಜಿ ರಾವ್ ಒಡೆತನದ ಈಟಿವಿ ಸಮೂಹ ಸಂಸ್ಥೆ ಮಾಡಿದೆ.
ಗುಜರಾತ್‌ನ 15ನೇ ಶತಮಾನದ ಕವಿ-ಸಂತ ನರಸಿಂಹ ಮೆಹ್ತಾ ಅವರು ವೈಷ್ಣವ ಜನತೋ ಸ್ತೋತ್ರವನ್ನು ರಚಿಸಿದ್ದರು. 500 ವರ್ಷಗಳ ಬಳಿಕವೂ ಈ ಭಜನೆ ಪ್ರಸ್ತುತವಾಗಿದೆ. ಸಾಬರಮತಿಯ ಆಶ್ರಮದಲ್ಲಿ ಎಲ್ಲ ಧರ್ಮಗಳ ಜನರು ವೈಷ್ಣವ ಜನತೋ ಭಜನೆ ಮಾಡುತ್ತಿದ್ದರು.
2019ರಲ್ಲಿ ಬಾಪೂಜಿಯ 150ನೇ ಜನ್ಮದಿನದ ಅಂಗವಾಗಿ ಈಟಿವಿ ಸಮೂಹ ಸಂಸ್ಥೆಯ ಮನವಿ ಮೇರೆಗೆ ಖ್ಯಾತ ಗಾಯಕರಾದ ವಿಜಯ ಪ್ರಕಾಶ್, ಕೆ ಎಸ್ ಚಿತ್ರಾ, ಯೋಗೇಶ್ ಗಾಧ್ವಿ, ಎಸ್ ಪಿ ಬಾಲಸುಬ್ರಮಣ್ಯಂ, ಸುಭಾಷ್ ಚಂದ್ರ ದಾಸ್, ಸಲಾಮತ್ ಖಾನ್, ಪಂಡಿತ್ ಚನ್ನುಲಾಲ್ ಮಿಶ್ರಾ ಸೇರಿದಂತೆ ವಿವಿಧ ರಾಜ್ಯಗಳ ಗಾನಗಂಧರ್ವರು ಈ ಗೀತೆಯನ್ನು ತಮ್ಮ ಕಂಠಸಿರಿಯಲ್ಲಿ ಹಾಡಿದ್ದರು.