ಕೊಯಮತ್ತೂರು(ತಮಿಳುನಾಡು) : ಮೇಕೆ ಮೇಯಿಸುತ್ತಿದ್ದ ವೃದ್ಧೆ ಬಳಿ ವಿಳಾಸ ಕೇಳುವ ನೆಪ ಮಾಡಿಕೊಂಡು ಆಕೆಯ ಚಿನ್ನ ಸರಗಳ್ಳತನ ಮಾಡಿದ್ದ ಆರೋಪದ ಮೇಲೆ 20 ವರ್ಷದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ತಮಿಳುನಾಡಿನ ಕೊಯಮತ್ತೂರು ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್ ಮತ್ತು ತೇಜಸ್ವಿನಿ ಎಂಬುವರೇ ಬಂಧಿತರು.
ಇಲ್ಲಿನ ತೊಂಡಮುತ್ತೂರಿನ ವಯೋವೃದ್ಧೆ ಕಾಳಿಯಮ್ಮಳ್ ಎಂಬುವರು ಏಪ್ರಿಲ್ 28ರಂದು ನರಸೀಪುರಂ ರಸ್ತೆಯ ಅಗ್ನಿಶಾಮಕ ಠಾಣೆ ಬಳಿಯ ಹೊಲದಲ್ಲಿ ಮೇಕೆಗಳನ್ನು ಮೇಯುತ್ತಿದ್ದರು. ಅಷ್ಟರಲ್ಲಿ ಓರ್ವ ಯುವತಿ ಮತ್ತು ಯುವಕ ಸ್ಕೂಟರ್‌ನಲ್ಲಿ ಅಲ್ಲಿಗೆ ಬಂದು ವಿಳಾಸ ಕೇಳುವ ನೆಪದಲ್ಲಿ ಈಕೆಯನ್ನು ಮಾತನಾಡಿಸಿದ್ದಾರೆ. ಯುವತಿ ಸ್ಕೂಟರ್ ನಡೆಸುತ್ತಿದ್ದರೆ, ಹಿಂಬದಿ ಕುಳಿತಿದ್ದ ಯುವಕ ಏಕಾಏಕಿ ಕಾಳಿಯಮ್ಮಳ್ ಬಳಿ ಇದ್ದ 5.5 ಪವನ್ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ.
ಈ ಬಗ್ಗೆ ದಾಖಲಾದ ದೂರಿನನ್ವಯ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಅಲ್ಲಿದ್ದ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದರು. ಸಿಸಿಟಿವಿಯಲ್ಲಿ ಸ್ಕೂಟರ್‌ನ ನಂಬರ್ ದಾಖಲಾಗಿತ್ತು. ಅಂತೆಯೇ ಅದರ ಜಾಡು ಹಿಡಿದು ಸೋಮಯಪಾಳ್ಯದ ಪ್ರಶಾಂತ್ ಹಾಗೂ ಸುಂಗಮ್ ಪ್ರದೇಶದ ತೇಜಸ್ವಿನಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ.
ಸ್ವತಃ ಮನೆಯಲ್ಲೂ ಕಳ್ಳತನ : ಬಂಧಿತ ಇಬ್ಬರೂ ಪೇರೂರು ಪಚ್ಚಪಾಳ್ಯಂನಲ್ಲಿರುವ ಖಾಸಗಿ ಕಾಲೇಜಿನಲ್ಲಿ 3ನೇ ವರ್ಷದ ಬಿಟೆಕ್ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೇ, ಪ್ರಶಾಂತ್ ಆನ್‌ಲೈನ್ ಬೆಟ್ಟಿಂಗ್ನಲ್ಲಿ ಅಪಾರ ಹಣವನ್ನು ಕಳೆದುಕೊಂಡಿದ್ದರು ಎನ್ನಲಾಗಿದೆ.
ಇಷ್ಟೇ ಅಲ್ಲ, ಪ್ರಶಾಂಶ್ನ ಮನೆಯಲ್ಲಿ ಈ ಹಿಂದೆ 30 ಪವನ್ ಚಿನ್ನಾಭರಣ ಕಳೆದು ಹೋಗಿತ್ತು ಎಂದು ಆತನ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಈ ಚಿನ್ನಾಭರಣವನ್ನು ಇದೇ ಪ್ರಶಾಂತ್ ಕದ್ದಿರುವುದು ಸಹ ವಿಚಾರಣೆ ಬೆಳಕಿಗೆ ಬಂದಿದೆ. ಆನ್‌ಲೈನ್ ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡ ಕಾರಣ ತಮ್ಮ ಖರ್ಚಿಗಾಗಿ ಮತ್ತು ಸಾಲ ತೀರಿಸಲು ಇಬ್ಬರೂ ಕಳ್ಳತನದಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮೊಬೈಲ್ನಲ್ಲಿ ಆಟವಾಡುತ್ತಿದ್ದಾಗ ಬ್ಯಾಟರಿ ಸ್ಫೋಟ: ಬಾಲಕನ ಎರಡು ಕೈ ಬೆರಳು ತುಂಡು!