ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಪುಲ್ವಾಮಾದ ತುಜ್ಜನ್ ಪ್ರದೇಶ ಮತ್ತು ಸೋಪೋರ್‌ನ ತುಲಿಬಲ್ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಮಂಗಳವಾರ ಎರಡು ಎನ್‌ಕೌಂಟರ್‌ಗಳು ನಡೆದಿವೆ. ಪುಲ್ವಾಮಾ ಮತ್ತು ಸೋಪೋರ್‌ನಲ್ಲಿ ಒಟ್ಟು ಮೂವರು ಉಗ್ರಗಾಮಿಗಳನ್ನು ಹೊಡೆದುರುಳಿಸಲಾಗಿದೆ. ಮೂರು ದಿನಗಳ ಹಿಂದೆ ಪೊಲೀಸ್ ಅಧಿಕಾರಿಯನ್ನು ಗುಂಡಿಟ್ಟು ಕೊಲೆ ಮಾಡಿದ್ದ ಉಗ್ರನನ್ನು ಸಹ ಸೇನೆ ಹೊಡೆದುರುಳಿಸಿದೆ.
ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಸೋಪೋರ್‌ನ ತುಲಿಬಲ್ ಗ್ರಾಮದಲ್ಲಿ ಉಗ್ರಗಾಮಿಗಳು ಇರುವ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿದವು. ಈ ವೇಳೆ, ನಡೆದ ಗುಂಡಿನ ಚಕಮಕಿಯಲ್ಲಿ ಸೇನೆ ಉಗ್ರನೊಬ್ಬನನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಓದಿ: ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಕಾಳಗ: ಎನ್ಕೌಂಟರ್ನಲ್ಲಿ ಇಬ್ಬರು ಉಗ್ರ ಹತ
ಪುಲ್ವಾಮಾದಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆಯು ಎನ್‌ಕೌಂಟರ್‌ಗೆ ತಿರುಗಿತು. ಬಳಿಕ ಭದ್ರತಾ ಪಡೆಗಳು ಉಗ್ರರಿಗೆ ಪ್ರತ್ಯುತ್ತರ ನೀಡುತ್ತಿದ್ದಾರೆ. ಪುಲ್ವಾಮಾ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರನ್ನು ಸೇನೆ ಹೊಡೆದುರುಳಿಸಿದೆ.
ಅದರಲ್ಲಿ ಒಬ್ಬ ಮಜೀದ್ ನಜೀರ್ ಎಂದು ಗುರುತಿಸಲಾಗಿದ್ದು, ಈ ಉಗ್ರ ಮೂರು ದಿನಗಳ ಹಿಂದೆ ಸಬ್ ಇನ್ಸ್‌ಪೆಕ್ಟರ್ ಫಾರೂಕ್ ಮಿರ್‌ನನ್ನು ಗುಂಡಿಕ್ಕಿ ಕೊಲೆ ಮಾಡಿದ್ದ. ಮೃತ ಉಗ್ರ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸೇರಿದವನಾಗಿದ್ದಾನೆ ಎಂದು ಕಾಶ್ಮೀರ ಐಜಿಪಿ ತಿಳಿಸಿದ್ದಾರೆ. ಎರಡೂ ಸ್ಥಳಗಳಲ್ಲಿ ಕಾರ್ಯಾಚರಣೆಗಳು ಮುಂದುವರಿದಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.