ಕಾಂಗ್ರೆಸ್. ಒಂದು ಕಾಲದಲ್ಲಿ ತನಗೆ ಸರಿಸಾಟಿಯೇ ಇಲ್ಲದೇ ಏಕಸ್ವಾಮ್ಯವಾಗಿ ಮುನ್ನುಗ್ಗುತ್ತಿದ್ದ ಪಕ್ಷ. ಇದೀಗ ಹೇಳಹೆಸರಿಲ್ಲದಂತೆ ನೇಪಥ್ಯಕ್ಕೆ ಸರಿಯುತ್ತಿದೆ. ಸ್ವಾತಂತ್ರ್ಯಪೂರ್ವದಲ್ಲಿ ಉದಯಿಸಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ಇದೀಗ ಬೆರಳೆಣಿಕೆಯಷ್ಟು ರಾಜ್ಯಗಳಲ್ಲೂ ಅಧಿಕಾರ ಇಲ್ಲದೇ ಮೂಲೆಗುಂಪಾಗಿದೆ.
ಕಳೆದ ಚುನಾವಣೆಯಲ್ಲಿ ಪಂಜಾಬ್ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಉಸಿರಾಡುತ್ತಿದ್ದ ಪಕ್ಷ ಇದೀಗ ಛತ್ತೀಸ್ಗಢ ಮತ್ತು ರಾಜಸ್ತಾನದಲ್ಲಿ ಮಾತ್ರ ಅಡಳಿತ ನಡೆಸುತ್ತಿದೆ. ಅದರಲ್ಲೂ ರಾಜಸ್ತಾನದಲ್ಲಿ ಆರ್ಎಲ್ಡಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ. ಅಲ್ಲಿಯೂ ಹಿರಿಕಿರಿಯ ರಾಜಕಾರಣಿಗಳ ಮಧ್ಯೆ ತೀವ್ರ ಕಿತ್ತಾಟ ನಡೆಯುತ್ತಿದೆ.
ಗಟ್ಟಿ ನಾಯಕತ್ವಕ್ಕೆ ಹೆಸರಾಗಿದ್ದ ಪಕ್ಷ ಇಂದು ಅದೇ ನಾಯಕತ್ವಕ್ಕಾಗಿ ಪರಿತಪಿಸುವಂತಾಗಿದೆ. ಹಾಗಾದರೆ, ಸ್ವಾತಂತ್ರ್ಯಪೂರ್ವದ ಪಕ್ಷವೊಂದು ನೇಪಥ್ಯಕ್ಕೆ ಸರಿಯಲು ಕಾರಣಗಳೇನು?
1. ಗಟ್ಟಿ ನಾಯಕತ್ವದ ಕೊರತೆ: ಜವಾಹರ್ ಲಾಲ್ ನೆಹರೂ, ಇಂದಿರಾಗಾಂಧಿ, ಮೊರಾರ್ಜಿ ದೇಸಾಯಿ, ಪ್ರಣಬ್ ಮುಖರ್ಜಿ ಅವರಂತಹ ಘಟಾನುಘಟಿ ನಾಯಕರನ್ನು ದೇಶಕ್ಕೆ ನೀಡಿದ ಕೀರ್ತಿ ಕಾಂಗ್ರೆಸ್ಗಿದೆ. ಆದರೆ, ಇಂದು ಅದೇ ಪಕ್ಷ ದೃಢ ನಿರ್ಧಾರ ತೆಗೆದುಕೊಳ್ಳುವ ಮತ್ತು ಚುನಾವಣಾ ರಣತಂತ್ರ ರೂಪಿಸುವ ನೇತಾರರ ಕೊರತೆಯನ್ನು ಎದುರಿಸುತ್ತಿದೆ.
ಪಕ್ಷದ ಏಕಮಾತ್ರ ನಾಯಕಿಯಾಗಿರುವ ಸೋನಿಯಾ ಗಾಂಧಿ ಅವರು ಈಗ ಪಕ್ಷದ ಮೇಲಿನ ಹಿಂದಿನ ಹಿಡಿತ ಕಳೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಅವರು ಏನೇ ಪ್ರಯತ್ನಿಸಿದರೂ ಪಕ್ಷವನ್ನು ತಮ್ಮ ಅಧೀನಕ್ಕೆ ಪಡೆದುಕೊಳ್ಳುವಲ್ಲಿ ಸಫಲರಾಗಿಲ್ಲ. ಇನ್ನು ಇಂದಿರಾಗಾಂಧಿ ಅವರ ತದ್ರೂಪಿ ಎಂದೇ ಬಿಂಬಿತರಾಗಿರುವ ಪ್ರಿಯಾಂಕಾ ಗಾಂಧಿ ಅವರ ಕೈಚಳಕವೂ ನಡೆಯುತ್ತಿಲ್ಲ. ಇದು ಪಕ್ಷ ಮತ್ತೆ ಮೈಕೊಡವಿ ಮೇಲೇಳಲು ಸಾಧ್ಯವಿಲ್ಲದಂತಾಗಿದೆ.
2. ನಾಯಕರ ಮಧ್ಯೆ ಬಿರುಕು: ಹಿರಿಯ ಮತ್ತು ಕಿರಿಯ ನಾಯಕರ ಮಧ್ಯೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಿರಿಯ ನಾಯಕರು ಪಕ್ಷದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿಲ್ಲ ಎಂದು ಈಗಾಗಲೇ ಸಚಿನ್ ಪೈಲಟ್, ಜ್ಯೋತಿರಾದಿತ್ಯ ಸಿಂಧಿಯಾ ಅವರಂತಹ ಮುನ್ನೆಲೆಯ ನಾಯಕರು ಪಕ್ಷದಿಂದ ದೂರವಾಗಿದ್ದಾರೆ.
3. ಬಿಜೆಪಿಯ ಪ್ರವರ್ಧಮಾನ: ದೇಶ ಮಾತ್ರವಲ್ಲದೇ, ವಿಶ್ವದಲ್ಲಿಯೇ ಅತಿದೊಡ್ಡ ಪಕ್ಷವಾಗಿ ಬೆಳೆದಿರುವ ಬಿಜೆಪಿಯ ಮುಂದೆ ಕಾಂಗ್ರೆಸ್ ಚಿಗುರದಂತಾಗಿದೆ. ಬಿಜೆಪಿಯ ರಣತಂತ್ರಕ್ಕೆ ಹಳೆಯ ಪಕ್ಷ ಪ್ರತಿತಂತ್ರ ಹೂಡುವಲ್ಲಿ ಎಡವುತ್ತಿದೆ. ಅಧಿಕಾರ ಪಡೆದ ರಾಜ್ಯಗಳನ್ನೂ ಉಳಿಸಿಕೊಳ್ಳಲಾಗದೇ, ಬರಿಗೈ ಮಾಡಿಕೊಂಡಿದೆ.
4. ಕಾಂಗ್ರೆಸ್ ಪಾಲಿಗೆ ಛತ್ತೀಸ್ಗಢ, ರಾಜಸ್ತಾನ ಜೀವವಾಯು: ಕಾಂಗ್ರೆಸ್ ಉಳಿದಿದೆ ಎಂಬುದಕ್ಕೆ ಛತ್ತೀಸ್ಗಢ ಮತ್ತು ರಾಜಸ್ತಾನ ರಾಜ್ಯಗಳನ್ನು ಮಾತ್ರ ತೋರಿಸಬಹುದು. ಪಂಜಾಬ್ನಲ್ಲಿ ಆಡಳಿತ ನಡೆಸುತ್ತಿದ್ದ ಪಕ್ಷವನ್ನು ಮತಪ್ರಭು ದೂರ ಸರಿಸಿ ಆಮ್ ಆದ್ಮಿಗೆ ಮಣೆ ಹಾಕಿದ್ದಾನೆ. ಈ ಹಿಂದೆ ಕರ್ನಾಟಕದಲ್ಲೂ ಕೂಡ ಇದೇ ತೆರನಾದ ಪರಿಸ್ಥಿತಿ ಉಂಟಾಗಿತ್ತು.
5. ಪಂಚರಾಜ್ಯ ಚುನಾವಣೆಯಲ್ಲಿ ಕಪಾಳಮೋಕ್ಷ: ಇನ್ನು ಉತ್ತರಾಖಂಡ, ಉತ್ತರಪ್ರದೇಶ, ಮಣಿಪುರ, ಗೋವಾ, ಪಂಜಾಬ್ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಇನ್ನಿಲ್ಲದ ರೀತಿಯಲ್ಲಿ ನೆಲಕಚ್ಚಿದೆ. ಉತ್ತರಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ (403 ಕ್ಷೇತ್ರ) ಎರಡಂಕಿಯನ್ನೂ ದಾಟಲಾಗದೇ ಹೀನಾಯ ಸೋಲುಂಡಿದೆ. ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 500 ಕ್ಕೂ ಅಧಿಕ ರ್ಯಾಲಿಗಳನ್ನು ಮಾಡಿ ಪಕ್ಷದ ಪ್ರಚಾರ ನಡೆಸಿದ್ದರು. ಆದರೆ, ಮತದಾರನ ಗಮ್ಯವೇ ಬೇರೆಯಾಗಿತ್ತು.
ಪಂಜಾಬ್ನಲ್ಲಿ ಅಧಿಕಾರ ನಡೆಸುತ್ತಿದ್ದ ಪಕ್ಷಕ್ಕೆ ಅಲ್ಲಿನ ನಾಯಕರ ಕಿತ್ತಾಟವೇ ಮಹಾ ಸೋಲಿಗೆ ಪ್ರಮುಖ ಕಾರಣ. ಪಕ್ಷದ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಹಠಮಾರಿತನ ಪಕ್ಷದ ನೌಕೆಯನ್ನು ಮುಳುಗಿಸಿದೆ. ಇನ್ನು ಉತ್ತರಾಖಂಡ, ಮಣಿಪುರ, ಗೋವಾದಲ್ಲಿ ಪಕ್ಷ ಹೇಳಿಕೊಳ್ಳುವಷ್ಟು ಸ್ಥಾನವನ್ನೂ ಪಡೆದಿಲ್ಲ.
ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಹೀಗಿದೆ..
- ಪಂಜಾಬ್-18
- ಉತ್ತರಪ್ರದೇಶ-02
- ಗೋವಾ-12
- ಮಣಿಪುರ-04
- ಉತ್ತರಾಖಂಡ-19