ನವದೆಹಲಿ: ದೇಶದ ಮೂರು ರಾಜ್ಯಗಳಲ್ಲಿ ಇಂದು ಭರದಿಂದ ವಿಧಾನಸಭಾ ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ. ಗೋವಾ, ಉತ್ತರಾಖಂಡ ಹಾಗೂ ಉತ್ತರಪ್ರದೇಶದಲ್ಲಿ ಮತದಾನ ನಡೆಯುತ್ತಿದೆ. ಗೋವಾ ವಿಚಾರಕ್ಕೆ ಬರುವುದಾದರೆ ಮಧ್ಯಾಹ್ನ 1 ಗಂಟೆಯವರೆಗೆ 44.62 ರಷ್ಟು ಮತದಾನವಾಗಿದ್ದು, ಇದು ದಾಖಲೆ ಮತದಾನ ಎಂದು ಕರೆಯಲಾಗುತ್ತಿದೆ.
ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ, ಕರಾವಳಿ ರಾಜ್ಯದ 40 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆಯವರೆಗೆ ಗೋವಾದಲ್ಲಿ 44.62 ರಷ್ಟು ಮತದಾನವಾಗಿದೆ. ಇಲ್ಲಿಯವರೆಗೆ, ಸಂಖಾಲಿಮ್ (ಉತ್ತರ ಗೋವಾ) ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇಕಡಾ 54 ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ. ಇಲ್ಲಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಪ್ರಮೋದ್ ಸಾವಂತ್ ಸ್ಪರ್ಧಿಸುತ್ತಿದ್ದಾರೆ. ಅಲ್ಲದೇ, ದಕ್ಷಿಣ ಗೋವಾದ ಸಂಗುಮ್ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ 53.91 ರಷ್ಟು ಮತದಾನವಾಗಿದೆ.ಅಧಿಕೃತ ಅಂಕಿ - ಅಂಶಗಳ ಪ್ರಕಾರ ವಾಲ್ಪೊಯ್ ಅಸೆಂಬ್ಲಿ ಭಾಗದಲ್ಲಿ 39 ರಷ್ಟು ಕಡಿಮೆ ಮತದಾನವಾಗಿದೆ
40 ವಿಧಾನಸಭಾ ಕ್ಷೇತ್ರಗಳಲ್ಲಿ 11 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿದ್ದು, ಕರಾವಳಿ ರಾಜ್ಯವಾದ ಗೋವಾದಲ್ಲಿ ಮತದಾನ ನಡೆಯುತ್ತಿದೆ. 12 ರಾಜಕೀಯ ಪಕ್ಷಗಳು ಮತ್ತು ಪಕ್ಷೇತರರಿಂದ ಒಟ್ಟಾರೆ 301 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಗೋವಾದಲ್ಲಿ ಇಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ. ಗೋವಾದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಬಿಜೆಪಿ ಗುರಿಯಾಗಿದೆ. ಬಹುಮತದೊಂದಿಗೆ ಸರ್ಕಾರ ರಚಿಸುವುದಾಗಿ ಸಿಎಂ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ.
ಉತ್ತರಾಖಂಡದಲ್ಲಿ ಚುನಾವಣೆ: ಉತ್ತರಾಖಂಡದ 70 ವಿಧಾನಸಭಾ ಸ್ಥಾನಗಳಿಗೆ ಇಂದು ಮತದಾನ ಆರಂಭವಾಗಿದೆ. ಬೆಳಗ್ಗೆ 8ರಿಂದ ಮತದಾನ ಆರಂಭವಾಗಿದ್ದು, ಸಂಜೆ 6ರವರೆಗೆ ನಡೆಯಲಿದೆ. ಮತದಾನಕ್ಕಾಗಿ ರಾಜ್ಯದಲ್ಲಿ 11,697 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಸತ್ಪಾಲ್ ಮಹಾರಾಜ್, ಸುಬೋಧ್ ಉನಿಯಾಲ್, ಅರವಿಂದ್ ಪಾಂಡೆ, ಧನ್ ಸಿಂಗ್ ರಾವತ್ ಮುಂತಾದವರ ಭವಿಷ್ಯ ಚುನಾವಣೆಯಲ್ಲಿ ನಿರ್ಧಾರವಾಗಲಿದೆ.
ಇದನ್ನೂ ಓದಿ: ಕೇರಳದಲ್ಲಿ ಪ್ರೇಮಿಗಳ ದಿನದಂದು ಸಪ್ತಪದಿ ತುಳಿದ ಸಲಿಂಗಿ ಜೋಡಿ.. ದೇಶದಲ್ಲಿ ಇದೇ ಮೊದಲು
ಮಧ್ಯಾಹ್ನ 1 ಗಂಟೆಯವರೆಗೆ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಶೇ 35.21 ಮತದಾನವಾಗಿದೆ. ಅದೇ ಸಮಯದಲ್ಲಿ, ಗೋವಾ ವಿಧಾನಸಭಾ ಚುನಾವಣೆಯಲ್ಲಿ ಶೇ 44.63, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶೇ 39.07 ಮತದಾನವಾಗಿದೆ.
ಒಟ್ಟಾರೆ ವಿವರ:
ಚಕ್ರತಾ - 25.59%
ವಿಕಾಸನಗರ- –23.55%
ಧರ್ಮಪುರ–- 18.80%
ಸಹಸ್ಪುರ್ - 22.05%
ರಾಯ್ಪುರ್ - 19.61%
ರಾಜಪುರ 15.56% –
ಡೆಹ್ರಾಡೂನ್ ಕ್ಯಾಂಟ್ - 17.64%
ಮಸ್ಸೂರಿ - 18.46%
ದೋಯಿವಾಲಾ - 19.54%
ರಿಷಿಕೇಶ - 16.75%
ಸಹರಾನ್‌ಪುರ ಜಿಲ್ಲೆಯ ಬೆಹತ್-1, ಬೂತ್ ಸಂಖ್ಯೆ-403 ರಲ್ಲಿ ನಿಯೋಜಿಸಲಾದ ಮತಗಟ್ಟೆ ಸಿಬ್ಬಂದಿ ನಿಮ್ಮ ಮತದಾನ ಮುಗಿದಿದೆ ಎಂದು ಹೇಳುವ ಮೂಲಕ ಮಹಿಳೆಯರಿಗೆ ಮತದಾನಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಗಂಭಿರ ಆರೋಪವನ್ನು ಎಸ್‌ಪಿ ಪಕ್ಷದ ವಿಷ್ಣು ರಾವಲ್ ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ದಯವಿಟ್ಟು ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ಗಮನಹರಿಸಿ ಮತ್ತು ನ್ಯಾಯಯುತ ಮತದಾನವನ್ನು ಖಚಿತಪಡಿಸಿಕೊಳ್ಳಿ ಎಂದು ಆಗ್ರಹಿಸಿದ್ದಾರೆ.
ನೀತಿ ಸಂಹಿತೆ ಉಲ್ಲಂಘಿಸಿದ್ರಾ ಸಿಎಂ ಧಾಮಿ ಪತ್ನಿ : ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಪತ್ನಿ ಗೀತಾ ಧಾಮಿ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ. ಮತದಾನ ಮಾಡದಿದ್ದರೂ ಆಕೆ ಮತ ಕೇಂದ್ರದ ಒಳಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಮೂಲಕ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಮತ ಕೇಂದ್ರದ ಬಾಗಿಲು ತಲುಪಿದ್ದಲ್ಲದೇ, ಆ ವೇಳೆ ಬಿಜೆಪಿ ಪಕ್ಷದ ಚಿಹ್ನೆ, ಪ್ರಚಾರ ಸಾಮಗ್ರಿಯನ್ನೂ ಹೊಂದಿದ್ದರು ಎಂದು ವರದಿಯಾಗಿದೆ.
ಉತ್ತರಾಖಂಡದದ ಬಾರ್ಕೋಟ್‌ನ ಯಮುನೋತ್ರಿ ವಿಧಾನಸಭಾ ಕ್ಷೇತ್ರದಲ್ಲಿ ಜನರು ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಇಲ್ಲಿನ ಮತಗಟ್ಟೆ ಸಂಖ್ಯೆ 158 ರಲ್ಲಿ ರಸ್ತೆ ಬೇಡಿಕೆಯ ಮೇರೆಗೆ ಜನರು ಚುನಾವಣೆ ಬಹಿಷ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದಲ್ಲದೇ ಯುಪಿಯ ಶಹಜಾನ್‌ಪುರದ ಬೂತ್‌ನಲ್ಲಿಯೂ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಮತದಾನದಲ್ಲಿ ಭಾಗವಹಿಸದಿರಲು ಜನರು ನಿರ್ಧರಿಸಿದ್ದಾರೆ. ಶಹಜಹಾನ್‌ಪುರದ ತಿಲ್ಹಾರ್‌ನಲ್ಲಿ ಜನರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಈ ಸಂಬಂಧ ಪೊಲೀಸರು ಹಾಗೂ ಸೆಕ್ಟರ್ ಮ್ಯಾಜಿಸ್ಟ್ರೇಟ್ ಬಲವಂತವಾಗಿ 3 ಮತ ಹಾಕಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಯನ್ನು ಸಾಮಾನ್ಯ ಜನರ ಅಸ್ತ್ರ ಎಂದು ಪರಿಗಣಿಸಲಾಗುತ್ತದೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಕೊರತೆಯಿಂದ ಜನರು ಮತದಾನ ಮಾಡದಿರುವುದು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ.. ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡ ನರ್ಸ್ ಗಾನವಿ ದೇಹದಾನ..
ಉತ್ತರಪ್ರದೇಶ: ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದರಲ್ಲಿ ಮೊದಲ ಹಂತ ಫೆಬ್ರವರಿ 10 ರಂದು ಪೂರ್ಣಗೊಂಡಿದೆ. ಎರಡನೇ ಹಂತದ ಮತದಾನ ಇಂದು ನಡೆಯುತ್ತಿದೆ. ಇದಲ್ಲದೆ, ಮೂರನೇ ಹಂತವು ಫೆಬ್ರವರಿ 20 ರಂದು, ನಾಲ್ಕನೇ ಹಂತವು ಫೆಬ್ರವರಿ 23 ರಂದು, ಐದನೇ ಹಂತವು ಫೆಬ್ರವರಿ 27 ರಂದು, ಆರನೇ ಹಂತವು ಮಾರ್ಚ್ 3 ರಂದು ಮತ್ತು ಏಳನೇ ಹಂತವು ಮಾರ್ಚ್ 7 ರಂದು ನಡೆಯಲಿದೆ.
ಯುಪಿಯಲ್ಲಿ ಎರಡನೇ ಹಂತದ ಚುನಾವಣೆಗೆ ಪ್ರಸ್ತುತ ಮತದಾನ ನಡೆಯುತ್ತಿದೆ. ಈ ಹಂತದಲ್ಲಿ ಎರಡು ಕೋಟಿ ಮತದಾರರು 586 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.ಈ ವಿಧಾನಸಭೆ ಕ್ಷೇತ್ರಗಳು ಒಂಬತ್ತು ಜಿಲ್ಲೆಗಳಲ್ಲಿ ಹರಡಿಕೊಂಡಿವೆ - ಸಹರಾನ್‌ಪುರ, ಬಿಜ್ನೋರ್, ಮೊರಾದಾಬಾದ್, ಸಂಭಾಲ್, ರಾಂಪುರ, ಅಮ್ರೋಹಾ, ಬುದೌನ್, ಬರೇಲಿ ಮತ್ತು ಶಹಜಹಾನ್‌ಪುರದಲ್ಲಿ ಮತದಾನ ನಡೆಯುತ್ತಿದೆ.
ಸೋಮವಾರದ ಎರಡನೇ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕೆಲವು ಪ್ರಮುಖ ಅಭ್ಯರ್ಥಿಗಳಲ್ಲಿ ಎಸ್‌ಪಿ ನಾಯಕ ಅಜಂ ಖಾನ್ (ರಾಂಪುರ್) ಮತ್ತು ರಾಜ್ಯ ಸಚಿವರಾದ ಬಲದೇವ್ ಸಿಂಗ್ ಔಲಾಖ್ (ಬಿಲಾಸ್‌ಪುರ್) ಮತ್ತು ಸುರೇಶ್ ಖನ್ನಾ (ಬಿಲಾಸ್‌ಪುರ್) ಸೇರಿದ್ದಾರೆ.
ಫೆಬ್ರವರಿ 10 ರಂದು 58 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 60% ಕ್ಕಿಂತ ಹೆಚ್ಚು ಮತದಾನವಾಗಿದೆ.ಯುಪಿ ಸೇರಿದಂತೆ ಗೋವಾ, ಉತ್ತರಾಖಂಡ, ಪಂಜಾಬ್ ಮತ್ತು ಮಣಿಪುರ ವಿಧಾನಸಭೆ ಚುನಾವಣೆ ಫಲಿತಾಂಶ ಮಾರ್ಚ್ 10 ರಂದು ಪ್ರಕಟವಾಗಲಿದೆ.
ಉತ್ತರ ಪ್ರದೇಶವು ಎಲ್ಲರಿಗೂ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಎತ್ತಿ ತೋರಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಾನ್ಪುರ ದೆಹತ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ, ಉತ್ತರ ಪ್ರದೇಶದಲ್ಲಿ ಬಿಜೆಪಿಯ ಆಡಳಿತದಲ್ಲಿ ಮುಸ್ಲಿಂ ಹುಡುಗಿಯರು ಸುರಕ್ಷಿತರಾಗಿದ್ದಾರೆ. ರಾಜ್ಯದಲ್ಲಿ ಈಗ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಹುಡುಗಿಯರು ಶಾಲಾ - ಕಾಲೇಜುಗಳಿಗೆ ಹೋಗುತ್ತಿದ್ದಾರೆ ಎಂದಿದ್ದಾರೆ.
ಆಡಳಿತಾರೂಢ ಬಿಜೆಪಿಗೆ ಇದು ಅತ್ಯಂತ ಪ್ರಮುಖ ಚುನಾವಣೆಯಾಗಿದೆ ಮತ್ತು ಕಾಂಗ್ರೆಸ್, ಎಎಪಿ ಮತ್ತು ಇತರ ವಿರೋಧ ಪಕ್ಷಗಳು ತಮ್ಮ ಪ್ರಚಾರದ ಸಮಯದಲ್ಲಿ ಗುರಿಯಾಗಿಸಿಕೊಂಡ ಮೋದಿ ಸರ್ಕಾರದ ನೀತಿಗಳಿಗೆ ಅಗ್ನಿಪರೀಕ್ಷೆಯಾಗಿದೆ.