ನವದೆಹಲಿ: ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಮತ್ತೆ ಅಧಿಕಾರದ ಗದ್ದುಗೆಗೇರುತ್ತಿದೆ. ರಾಜ್ಯದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ನೇರ ಪೈಪೋಟಿ ನೀಡಲಿದೆ ಎಂಬ ಭವಿಷ್ಯಗಳು ಸುಳ್ಳಾಗಿವೆ. ಕಮಲ ಪಕ್ಷ ಭಾರಿ ಬಹುಮತದಿಂದ ಅಧಿಕಾರ ಉಳಿಸಿಕೊಳ್ಳುವಲ್ಲಿ 'ಲಾಡ್ಲಿ ಬೆಹ್ನಾ' ಯೋಜನೆಯ ಪಾತ್ರ ಪ್ರಮುಖವಾಗಿದೆ ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ.
ಮಧ್ಯಪ್ರದೇಶದ 230 ಸದಸ್ಯಬಲದ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬಂದಿದೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಬಿಜೆಪಿ 163, ಕಾಂಗ್ರೆಸ್ 66 ಸ್ಥಾನ ದೊರೆತಿದೆ. ಇದು ಕೇಸರಿ ಪಾಳಯ ಬೃಹತ್ ಗೆಲುವಿನ ಮೂಲಕ ಮತ್ತೆ ಆಡಳಿತದ ಚುಕ್ಕಾಣಿಯುವ ಸ್ಪಷ್ಟ ಸೂಚನೆ ನೀಡಿದೆ. ಮತ್ತೆ ಮುಖ್ಯಮಂತ್ರಿ ಗಾದಿಯ ಮೇಲೆ ಶಿವರಾಜ್ ಸಿಂಗ್ ಚೌಹಾಣ್ ಕಣ್ಣಿಟ್ಟಿದ್ದಾರೆ.
ಬಿಜೆಪಿ ಕೈ ಹಿಡಿದ 'ಲಾಡ್ಲಿ ಬೆಹ್ನಾ': 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಹಿಡಿದು 15 ತಿಂಗಳು ಅಧಿಕಾರ ನಡೆಸಿತ್ತು. 2020ರಲ್ಲಿ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಶಾಸಕರ ವಲಸೆಯಿಂದಾಗಿ ಕೈ ಪಡೆಯ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಬಾರಿ ಚುನಾವಣಾ ಹೊಸ್ತಿಲಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಮಹಿಳೆಯರಿಗೆ ಆರ್ಥಿಕ ನೆರವು ಕಲ್ಪಿಸುವ 'ಲಾಡ್ಲಿ ಬೆಹ್ನಾ' ಎಂಬ ಯೋಜನೆ ಜಾರಿಗೆ ತಂದಿದ್ದರು. ಈ ಯೋಜನೆಯ ಮೂಲಕ ರಾಜ್ಯದ ಬಡ ಕುಟುಂಬಗಳ ಅರ್ಹ ಮಹಿಳೆಯರಿಗೆ ಮಾಸಿಕವಾಗಿ 1,250 ರೂಗಳನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ. ಈ ಚುನಾವಣೆಯಲ್ಲಿ 'ಲಾಡ್ಲಿ ಬೆಹ್ನಾ'ನಂತಹ ಯೋಜನೆಗಳು ಬಿಜೆಪಿ ಕೈ ಹಿಡಿದಿವೆ ಎಂದೇ ಹೇಳಲಾಗುತ್ತಿದೆ.
ಪ್ರಧಾನಿ ಮೋದಿ, 'ಲಾಡ್ಲಿ ಬೆಹ್ನಾ' ಯೋಜನೆಗೆ ಗೆಲುವಿನ ಶ್ರೇಯಸ್ಸು- ಸಿಎಂ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತ ಇರುವುದರಿಂದ ಅಭಿವೃದ್ಧಿಗೆ 'ಡಬಲ್ ಎಂಜಿನ್' ಸರ್ಕಾರ ಅಗತ್ಯ ಎಂಬ ಪ್ರಚಾರವನ್ನು ಬಿಜೆಪಿ ನಾಯಕರು ವ್ಯಾಪಕವಾಗಿ ಮಾಡಿದ್ದಾರೆ. ಖುದ್ದು ಸಿಎಂ ಚೌಹಾಣ್ ಅವರೇ ಡಬಲ್ ಎಂಜಿನ್ ಬಿಜೆಪಿ ಸರ್ಕಾರಕ್ಕಾಗಿ ಮತ ನೀಡುವಂತೆ ಜನರಿಗೆ ಮನವಿ ಮಾಡಿದ್ದರು. 'ಮೋದಿ ಮಧ್ಯಪ್ರದೇಶದ ಜನಮನದಲ್ಲಿ ಇದ್ದಾರೆ. ಹಾಗೆಯೇ ಮೋದಿ ಮನದಲ್ಲಿ ಮಧ್ಯಪ್ರದೇಶ ಇದೆ' ಎಂಬಂತಹ ಘೋಷಣೆಗಳನ್ನು ಸಾರ್ವಜನಿಕ ಸಭೆಗಳಲ್ಲಿ ಮೊಳಗಿಸುತ್ತಾ ಜನರನ್ನು ಸೆಳೆಯುವ ಪ್ರಯತ್ನ ಮಾಡಿದ್ದರು. ಇದೀಗ ರಾಜ್ಯದ ಚುನಾವಣಾ ಫಲಿತಾಂಶದ ಶ್ರೇಯಸ್ಸು ಡಬಲ್ ಎಂಜಿನ್ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.
ಮುಂದುವರೆದು ಮಾತನಾಡಿದ ಅವರು, ''ಬಿಜೆಪಿಗೆ ಅನುಕೂಲಕರ ಬಹುಮತ ಸಿಗುತ್ತದೆ ಎಂದು ನಾನು ಹೇಳಿದ್ದೆ. ಇಂದು ನಾವು ಅದನ್ನು ಸಾಧಿಸುತ್ತಿದ್ದೇವೆ. ಈ ಪ್ರಚಂಡ ಸಾಧನೆಯ ಸಂಪೂರ್ಣ ಶ್ರೇಯಸ್ಸನ್ನು 'ಲಾಡ್ಲಿ ಬೆಹ್ನಾ' ಯೋಜನೆಗೂ ನೀಡುತ್ತೇನೆ. ಇದರ ಜೊತೆಗೆ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ನಮಗೆ ಅನುಕೂಲ ಮಾಡಿಕೊಟ್ಟಿದ್ದು, ಜನರು ಮೋದಿ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ'' ಎಂದು ಅವರು ತಿಳಿಸಿದರು.
ಇದನ್ನೂ ಓದಿ: ರಾಜಸ್ಥಾನ ಫಲಿತಾಂಶ: ಬಹುಮತದ ಗಡಿ ದಾಟಿದ ಬಿಜೆಪಿ