ನವದೆಹಲಿ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಕೇಂದ್ರೀಯ ಚುನಾವಣಾ ಪ್ರಾಧಿಕಾರವು (Central Election Authority -CEA) ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯೂಸಿ) ಒಪ್ಪಿಗೆಗಾಗಿ ಕಾಯುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದ ಆಂತರಿಕ ಚುನಾವಣೆಗಳನ್ನು ನಡೆಸುವ ಅಧಿಕಾರ ಹೊಂದಿರುವ ಸಿಇಎ ಈಗಾಗಲೇ ಮತದಾರರ ಪಟ್ಟಿಯನ್ನು ತಯಾರಿಸಿದೆ. ಚುನಾವಣೆ ನಡೆಸಲು ಸಿಡಬ್ಲ್ಯೂಸಿ ಅಂತಿಮ ಒಪ್ಪಿಗೆ ನೀಡಬೇಕಿದೆ.
ಇದು ಮಾತ್ರವಲ್ಲದೇ ಕಾಂಗ್ರೆಸ್ ಮತ್ತೊಂದು ಯೋಜನೆ ಅಂದರೆ ಪ್ಲ್ಯಾನ್ ಬಿ ಯನ್ನು ಸಹ ಹೊಂದಿದೆ ಎಂದು ಹೇಳಲಾಗುತ್ತಿದೆ. ಇದರ ಪ್ರಕಾರ ಸೋನಿಯಾ ಗಾಂಧಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮುಂದುವರಿಸುವುದು ಮತ್ತು ಪ್ರತಿಯೊಂದು ವಲಯಕ್ಕೆ ಪ್ರತ್ಯೇಕ ಕಾರ್ಯಾಧ್ಯಕ್ಷರನ್ನು ನೇಮಿಸುವ ಯೋಜನೆಯಿದೆ.
ಬಹಳ ಹಿಂದೆಯೇ ಈ ಪ್ಲ್ಯಾನ್ ರೆಡಿಯಾಗಿದೆ ಎನ್ನಲಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಹುದ್ದೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೆಸರು ಕೇಳಿ ಬರುತ್ತಿದೆ. ಆದರೆ, ಪಕ್ಷದ ಉನ್ನತ ಹುದ್ದೆಯನ್ನು ಅವರು ನಿರಾಕರಿಸಿದ್ದಾರೆಂದು ಮತ್ತು ಆ ಸ್ಥಾನಕ್ಕೆ ರಾಹುಲ್ ಗಾಂಧಿ ಬರಲಿ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 21 ರಿಂದ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸುವ ಯೋಚನೆಯಲ್ಲಿ ಕಾಂಗ್ರೆಸ್ ಇದೆ. ಆದರೆ, ಈವರೆಗೂ ಸಿಡಬ್ಲ್ಯೂಸಿ ಮೀಟಿಂಗ್ ಕರೆಯಲಾಗಿಲ್ಲ. ಹಿಂದುಳಿದ ವರ್ಗಕ್ಕೆ ಸೇರಿದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸುಶೀಲಕುಮಾರ ಶಿಂಧೆ ಮತ್ತು ಮೀರಾ ಕುಮಾರ ಅವರಿಗೆ ಉನ್ನತ ಹುದ್ದೆಗಳನ್ನು ನೀಡಬಹುದು ಎನ್ನಲಾಗಿದೆ. ಖರ್ಗೆ ರಾಹುಲ್ ಗಾಂಧಿಯವರಿಗೆ ಅತಿ ಹೆಚ್ಚು ವಿಶ್ವಾಸಿಕರಾಗಿದ್ದು, ಕರ್ನಾಟಕದ ಚುನಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಗಳಿವೆ.
ಈ ಮಧ್ಯೆ, ರಾಜ್ಯಗಳ ಮುಖ್ಯಸ್ಥರೊಂದಿಗೆ ರಾಹುಲ್ ಗಾಂಧಿ ಸರಣಿ ಸಭೆಗಳನ್ನು ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಸಾರ್ವತ್ರಿಕ ಚುನಾವಣೆಯ ಮುನ್ನ ದೇಶದ ಎಲ್ಲ ಜಿಲ್ಲೆಗಳಿಗೂ ರಾಹುಲ್ ಗಾಂಧಿ ಭೇಟಿ ನೀಡುವ ಇರಾದೆ ಹೊಂದಿದ್ದಾರೆ ಎನ್ನಲಾಗಿದೆ. ಈ ಯೋಜನೆಯು ಇನ್ನೂ ಅಂತಿಮವಾಗಿಲ್ಲ. ಗಾಂಧಿ ಕುಟುಂಬದ ಹೊರಗಿನವರು ಪಕ್ಷದ ಚುಕ್ಕಾಣಿ ಹಿಡಿಯಬೇಕೆಂಬ ರಾಹುಲ್ ಗಾಂಧಿ ಹೇಳಿಕೆಯು ಪಕ್ಷದೊಳಗೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಪಕ್ಷಾಧ್ಯಕ್ಷ ಸ್ಥಾನವನ್ನು ಮತ್ತೆ ಒಪ್ಪಿಕೊಳ್ಳುವಂತೆ ರಾಹುಲ್ ಆಪ್ತರು ಅವರಿಗೆ ಒತ್ತಾಯಿಸುತ್ತಿದ್ದಾರೆ.
ಎಐಸಿಸಿ ಅಧ್ಯಕ್ಷರ ಚುನಾವಣೆಯು ಆಗಸ್ಟ್ 21 ಮತ್ತು ಸೆಪ್ಟೆಂಬರ್ 20ರ ನಡುವೆ ನಡೆಯಲಿದೆ.
ಇದನ್ನು ಓದಿ:ಗೋರಖನಾಥನಿಗೆ ಪೂಜಿಸಿ ಸಿಎಂ ಯೋಗಿ ಆದಿತ್ಯನಾಥ್ ಶ್ರೀಕೃಷ್ಣ ಜನ್ಮಾಷ್ಟಮಿ