ಕೊರ್ಬಾ (ಛತ್ತೀಸಗಢ): ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಗ್ರಾಮವೊಂದರಲ್ಲಿ 84 ವರ್ಷದ ವೃದ್ಧೆಯನ್ನು ಕಾಡಾನೆಗಳು ತುಳಿದು ಕೊಂದಿರುವ ಘಟನೆ ಮಂಗಳವಾರ ನಡೆದಿದೆ. ಪಸನ್ ಅರಣ್ಯ ಪ್ರದೇಶದ ಪಂಗಾವಾ ಗ್ರಾಮದಲ್ಲಿ ವೃದ್ದೆ ತನ್ನ ಮನೆಯಲ್ಲಿ ಮಲಗಿದ್ದ ವೇಳೆ ಆನೆಗಳು ದಾಳಿ ಮಾಡಿವೆ ಎಂದು ಕಟ್ಘೋರಾ ವಿಭಾಗದ ಅರಣ್ಯಾಧಿಕಾರಿ ನಿಶಾಂತ್ ತಿಳಿಸಿದ್ದಾರೆ.
ಸುಮಾರು 42 ಆನೆಗಳ ಹಿಂಡು ಬೆಳ್ಳಂಬೆಳಗ್ಗೆ ಪಂಗಾವ ಗ್ರಾಮದ ಸಮೀಪವಿರುವ ಬೈಗಾಪಾರ ಎಂಬಲ್ಲಿಗೆ ನುಗ್ಗಿವೆ. ಈ ವೇಳೆ ಕೆಲ ಆನೆಗಳು ರಾಗಿಯನ್ನು ತಿನ್ನಲು ವೃದ್ದೆಯ ಮನೆಗೆ ನುಗ್ಗಿದ್ದು, ಈ ವೇಳೆ ಮನೆಯಲ್ಲಿ ಮಲುಗಿದ್ದ ವೃದ್ಧೆಯನ್ನು ತುಳಿದು ಕೊಂದಿವೆ ಎಂದು ನಿಶಾಂತ್ ಹೇಳಿದ್ದಾರೆ. ಇದೇ ಮನೆಯಲ್ಲಿದ್ದ ಕುಟುಂಬಸ್ಥರು ಆನೆಗಳ ಹಿಂಡು ಕಂಡು ತಪ್ಪಿಸಿಕೊಂಡು ಹೊರ ಓಡಿದ್ದಾರೆ. ಪ್ರಸ್ತುತ ಮೃತರ ಕುಟುಂಬಕ್ಕೆ 25,000 ರೂಪಾಯಿ ಪರಿಹಾರ ನೀಡಲಾಗಿದ್ದು, ಅಗತ್ಯತೆಗಳ ಪರಿಶೀಲಿಸಿ ಉಳಿದ ಪರಿಹಾರವನ್ನು ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಈ ಪ್ರದೇಶದಲ್ಲಿ ಆನೆಗಳ ಹಿಂಡು ತಿರುಗಾಡುತ್ತಿದ್ದು, ಗ್ರಾಮಸ್ಥರಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. 42 ಆನೆಗಳ ಹಿಂಡುಗಳಲ್ಲಿ 35 ಆನೆಗಳು ಬೆಳಗ್ಗೆ ಪಾಂಗಾವದಿಂದ, ಪಾಲಿ ಗ್ರಾಮದತ್ತ ಹೋಗಿವೆ. ಉಳಿದ ಏಳು ಕೊರ್ಬಿ ಅರಣ್ಯ ಪ್ರದೇಶಕ್ಕೆ ಹಿಂತಿರುಗಿವೆ ಎಂದು ಡಿಎಫ್ಒ ಹೇಳಿದರು. ಆನೆಗಳ ಚಲನವಲನದ ಮೇಲೆ ನಿಗಾ ವಹಿಸಿಲು ಅರಣ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಭಾನುವಾರದಂದು ಕಟ್ಘೋರಾ ಅರಣ್ಯ ಪ್ರದೇಶದ ಬಳಿ ಆನೆ ದಾಳಿಗೆ ಒಂದೇ ಕುಟುಂಬದ ಇಬ್ಬರು ಮಹಿಳೆಯರು ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡಿದ್ದ. ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಮೂವರು ಕಟ್ಘೋರಾ ಅರಣ್ಯ ಸಮೀಪದ ಚೋಟಿಯಾ ಕಲ್ಲಿದ್ದಲು ಗಣಿ ಪ್ರದೇಶದ ಬಳಿ ಬಿದಿರು ಕತ್ತರಿಸಲು ಹೋಗಿದ್ದರು. ಈ ವೇಳೆ, ಕಾಡಾನೆಯೊಂದು ಏಕಾಏಕಿ ಮೂವರ ಮೇಲೆ ದಾಳಿ ನಡೆಸಿತ್ತು. ಪುನ್ನಿ ಬಾಯಿ ಮತ್ತು ರಾಜಕುಮಾರಿ ಮೃತರು ಎಂದು ಗುರುತಿಸಲಾಗಿದೆ. ಸರಸಿಂಗ್ ಪೈಕ್ರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರ ಕಟುಂಬಕ್ಕೆ 6ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಗಿದೆ. ಪ್ರಸ್ತುತ 25 ಸಾವಿರ ರೂಗಳನ್ನು ನೀಡಲಾಗಿದ್ದು, ಪರಿಶೀಲನೆ ಪೂರ್ಣಗೊಂಡ ಬಳಿಕ ಉಳಿದ ಹಣವನ್ನು ಕೊಡಲಾಗುತ್ತದೆ. ಗಾಯಾಳುವಿನ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಅರಣ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಹಸು ಕೊಂದಿದ್ದಕ್ಕೆ ವಿಷಪ್ರಾಶನ ಮಾಡಿಸಿ 2 ಹುಲಿಗಳ ಹತ್ಯೆ ಮಾಡಿದ ತಮಿಳುನಾಡು ವ್ಯಕ್ತಿ: ಅರೆಸ್ಟ್