ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಇತರೆ ನಗರಗಳಲ್ಲಿ ಸೈಬರ್ ಕ್ರೈಂ ಮತ್ತು ಹನಿಟ್ರ್ಯಾಪ್ನಂತಹ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ದೆಹಲಿಯಲ್ಲಿ ಸೈಬರ್ ಅಪರಾಧ ಪ್ರಕರಣವೊಂದರಲ್ಲಿ ಸಿಲುಕಿದ್ದ ವೃದ್ಧರೊಬ್ಬರನ್ನು ಪೊಲೀಸರು ರಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣದ ಸಂಪೂರ್ಣ ವಿವರ: ಶಾಹದಾರಾ ಜಿಲ್ಲೆಯ ಸೈಬರ್ ಸೆಲ್ ಠಾಣೆ ಪೊಲೀಸರು ರಾಜಸ್ಥಾನದ ವಂಚಕ ತಂಡದ ಇಬ್ಬರು ಸದಸ್ಯರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ರಾಜಸ್ಥಾನ ನಿವಾಸಿಗಳಾದ ಬರ್ಖತ್ ಖಾನ್ (32) ಮತ್ತು ರಿಜ್ವಾನ್ (22) ಎಂದು ಗುರುತಿಸಲಾಗಿದೆ. ಇವರ ಮನೆಯಿಂದ ಆರು ಮೊಬೈಲ್ ಫೋನ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಜಿಲ್ಲಾ ಪೊಲೀಸ್ ಉಪ ಆಯುಕ್ತ ರೋಹಿತ್ ಮೀನಾ ಮಾತನಾಡಿ, "ಜುಲೈ 18ರಂದು ವೃದ್ಧರೊಬ್ಬರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತಮ್ಮ ವಾಟ್ಸ್‌ಆ್ಯಪ್‌ಗೆ ಅಪರಿಚಿತ ಸಂಖ್ಯೆಯಿಂದ ವಿಡಿಯೋ ಕರೆ ಬಂದಿತ್ತು. ಫೋನ್ ರಿಸೀವ್ ಮಾಡಿದಾಗ ಹುಡುಗಿಯೊಬ್ಬಳು ಅಶ್ಲೀಲವಾಗಿ ಕಂಡಳು. ನಾನು ಕೂಡಲೇ ಫೋನ್ ಕಟ್ ಮಾಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಾಲ್ ರಿಸೀವ್ ಮಾಡಿದ ಕೂಡಲೇ ಆ ಹುಡುಗಿ ಸಂತ್ರಸ್ತ ಮುಖದೊಂದಿಗೆ ಕರೆಯ ಸ್ಕ್ರೀನ್‌ಶಾಟ್ ತೆಗೆದುಕೊಂಡಿದ್ದಾಳೆ."
"ಸ್ವಲ್ಪ ಸಮಯದ ನಂತರ ಮತ್ತೆ ಅಪರಿಚಿತ ಸಂಖ್ಯೆಯಿಂದ ಕರೆ ಬರಲಾರಂಭಿಸಿತು. ಕರೆ ಮಾಡಿದ ವ್ಯಕ್ತಿ ತನ್ನನ್ನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಆ ಗ್ಯಾಂಗ್ ಸ್ಕ್ರೀನ್‌ಶಾಟ್‌ಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿ, ಹಣಕ್ಕಾಗಿ ಒತ್ತಾಯಿಸಿತು."
"ಮೊದಲು ಹಣಕ್ಕಾಗಿ ಒತ್ತಾಯಿಸಿದಾಗ ನಾನು ಹೆಚ್ಚು ಗಮನ ಹರಿಸಲಿಲ್ಲ. ಬಳಿಕ ಆರೋಪಿಗಳು ಹುಡುಗಿ ಆತ್ಮಹತ್ಯೆ ಮಾಡಿಕೊಂಡಿರುವ ಫೋಟೋಗಳನ್ನು ನನ್ನ ವಾಟ್ಸ್‌ಆ್ಯಪ್‌ಗೆ ಕಳುಹಿಸಿದರು. ಆ ನಂತರ ಆರೋಪಿಗಳು ಮತ್ತೆ ಬೆದರಿಕೆ ಹಾಕಲು ಶುರು ಮಾಡಿದರು. ಇಂತಹ ಪರಿಸ್ಥಿತಿಯಲ್ಲಿ ನನಗೇಏನು ಮಾಡ್ಬೇಕು ಎಂದು ತೋಚದೆ ಆರೋಪಿಗಳು ನೀಡಿದ ಬ್ಯಾಂಕ್ ಖಾತೆಗೆ 12,80,000 ರೂಪಾಯಿ ಹಾಕಿದ್ದೇನೆ" ಎಂದು ಸಂತ್ರಸ್ತ ದೂರಿನಲ್ಲಿ ತಿಳಿಸಿದ್ದಾರೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಆರೋಪಿಗಳನ್ನು ಹಿಡಿಯಲು ಪೊಲೀಸ್ ಠಾಣೆ ಪ್ರಭಾರಿ ಸಂಜಯ್ ಕುಮಾರ್ ನೇತೃತ್ವದಲ್ಲಿ ಹೆಡ್ ಕಾನ್‌ಸ್ಟೆಬಲ್‌ಗಳಾದ ದೀಪಕ್, ರಾಜ್‌ದೀಪ್ ಮತ್ತು ರವೀಂದ್ರ ಸೇರಿದಂತೆ ತಂಡ ರಚಿಸಲಾಗಿತ್ತು.ಪ್ರಕರಣದ ತನಿಖೆ ನಡೆಸಿದ ಪೊಲೀಸರು ರಾಜಸ್ಥಾನಕ್ಕೆ ತೆರಳಿ ರಿಜ್ವಾನ್‌ನನ್ನು ಬಂಧಿಸಿದರು. ರಾಜಸ್ಥಾನದ ನಿವಾಸಿಗಳಾದ ಆರಿಫ್ ಮತ್ತು ಜುನೈದ್ ಈ ಕೆಲಸಕ್ಕೆ ಬೆಂಬಲ ನೀಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಅವರನ್ನು ಬಂಧಿಸಲು ಹೋದಾಗ ಆರೋಪಿಗಳನ್ನು ರಕ್ಷಿಸಲು ಜನರು ಅಲ್ಲಿ ಜಮಾಯಿಸಿದ್ದರು. ಆತನ ಮನೆಯಿಂದ ಆರು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಛತ್ತೀಸ್‌ಗಢ: ರಾಜಕೀಯ ಪಕ್ಷಕ್ಕೆ ಬೆಟ್ಟಿಂಗ್ ಆ್ಯಪ್ ಪ್ರವರ್ತಕರಿಂದ ₹3 ಕೋಟಿ ಹಣ ರವಾನೆ; ವಶಕ್ಕೆ ಪಡೆದ ಇಡಿ