ಮುಂಬೈ (ಮಹಾರಾಷ್ಟ್ರ): ಉದ್ಧವ್ ಠಾಕ್ರೆ ವಿರುದ್ಧ ಬಂಡೆದ್ದು ಬಿಜೆಪಿಯ ಬೆಂಬಲದಿಂದ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿರುವ ಏಕನಾಥ್ ಶಿಂದೆ ಇಂದು ವಿಶ್ವಾಸಮತದ ಅಗ್ನಿಪರೀಕ್ಷೆ ಎದುರಿಸುವರು. ನಿನ್ನೆಯಿಂದ ಆರಂಭವಾಗಿರುವ ವಿಶೇಷ ಅಧಿವೇಶನದ ಮೊದಲ ದಿನ ಸ್ಪೀಕರ್ ಆಯ್ಕೆಯಲ್ಲಿ ಗೆದ್ದಿದ್ದ ಶಿಂದೆ ಇಂದಿನ ಪರೀಕ್ಷೆಯಲ್ಲೂ ಸಲೀಸಾಗಿ ಜಯಿಸಲಿದ್ದಾರೆ.
ವಿಶ್ವಾಸಮತವನ್ನು ಗೆಲ್ಲಲು ಬಿಜೆಪಿ ಮತ್ತು ಶಿವಸೇನೆ ಬಂಡಾಯ ಶಾಸಕರು ಸಭೆ ನಡೆಸಿ ರಣತಂತ್ರ ರೂಪಿಸಿದ್ದಾರೆ. ಏಕನಾಥ್ ಶಿಂದೆ ಸರ್ಕಾರಕ್ಕೆ ಅಗತ್ಯ ಬಹುಮತ ಇರುವ ಕಾರಣ ಇಂದಿನ ವಿಶ್ವಾಸಮತ ನಾಮ್ಕೇವಾಸ್ಥೆ ನಡೆಯಲಿದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 106 ಮತ್ತು ಬಂಡಾಯ ಶಿವಸೇನೆಯ ಬಣದ 39, ಸ್ವತಂತ್ರ ಅಭ್ಯರ್ಥಿಗಳು ಸೇರಿ ನೂತನ ಮುಖ್ಯಮಂತ್ರಿ ಶಿಂದೆಗೆ 164 ಶಾಸಕರ ಬಲವಿದೆ. ವಿಪಕ್ಷಗಳಾದ ಉದ್ಧವ್ ಠಾಕ್ರೆ ಬಣ, ಎನ್ಸಿಪಿ, ಕಾಂಗ್ರೆಸ್ ಸೇರಿದಂತೆ ಉಳಿದ ಪಕ್ಷಗಳು 112 ಸದಸ್ಯರಿದ್ದಾರೆ. ಬಹುಮತ ಸಾಬೀತಿಗೆ 144 ಮತಗಳು ಮಾತ್ರ ಬೇಕಾಗಿವೆ.
ಇಲ್ಲಿಯವರೆಗೂ ಏನೇನಾಯ್ತು?:
1. ಮಹಾರಾಷ್ಟ್ರ ರಾಜಕೀಯದಲ್ಲಿ ಕಳೆದ 10 ದಿನಗಳಿಂದ ಮಹಾ ನಾಟಕವೇ ಘಟಿಸಿದೆ. ಶಿವಸೇನೆಯ ನಾಯಕ ಏಕನಾಥ್ ಶಿಂದೆ ತಮ್ಮ ಪಕ್ಷದ 39 ಶಾಸಕರನ್ನು ಒಗ್ಗೂಡಿಸಿ ಉದ್ಧವ್ ಠಾಕ್ರೆ ಸರ್ಕಾರದ ಸರ್ಕಾರದ ವಿರುದ್ಧ ಬಂಡೆದ್ದಿದ್ದರು. ಅಸ್ಸೋಂನ ಗುವಾಹಟಿಯಲ್ಲಿ ಬೀಡುಬಿಟ್ಟು ಸರ್ಕಾರದ ನೀತಿಯನ್ನು ಖಂಡಿಸಿದ್ದರು.
2. ಬಂಡಾಯ ಶಾಸಕರ ಮನವೊಲಿಸಲು ಮುಂದಾದ ಉದ್ಧವ್ ಠಾಕ್ರೆ ಇಲ್ಲಿಗೆ ಬಂದು ಮಾತನಾಡಿ ಎಂದು ಕೋರಿದ್ದರು. ಇದಕ್ಕೆ ಬಂಡಾಯ ಶಾಸಕರು ಬಗ್ಗಲಿಲ್ಲ. ಬಳಿಕ ಪಕ್ಷಾಂತರ ಕಾಯ್ದೆಯಡಿ 16 ಬಂಡಾಯ ಶಾಸಕರ ಅನರ್ಹತೆಗೆ ಠಾಕ್ರೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದರು. ಈ ಕೇಸ್ ಇದೀಗ ವಿಚಾರಣೆ ಹಂತದಲ್ಲಿದೆ.
3. ಉದ್ಧವ್ ರಾಜೀನಾಮೆ: ತಮ್ಮ ಪಕ್ಷದ ಶಾಸಕರ ಬಂಡಾಯದಿಂದ ಉದ್ಧವ್ ಠಾಕ್ರೆ ಸರ್ಕಾರ ಬಹುಮತ ಕಳೆದುಕೊಂಡಿತ್ತು. ಇದರಿಂದ ರಾಜ್ಯಪಾಲರು ಬಹುಮತ ಸಾಬೀತಿಗೆ ಸೂಚಿಸಿದ್ದರು. ಸುಪ್ರೀಂಕೋರ್ಟ್ ಕೂಡ ವಿಶ್ವಾಸಮತಕ್ಕೆ ಆದೇಶಿಸಿತ್ತು. ಇದರಿಂದ ಪೇಚಿಗೆ ಬಿದ್ದ ಉದ್ಧವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
4. ಇದಾದ ಬಳಿಕ ಬಿಜೆಪಿ ಬೆಂಬಲ ಪಡೆದ ಬಂಡಾಯ ನಾಯಕ ಏಕನಾಥ್ ಶಿಂದೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಉಪಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಆಯ್ಕೆಯಾಗಿದ್ದಾರೆ. ಅಧಿವೇಶನದ ಮೊದಲ ದಿನ ಬಿಜೆಪಿಯ ರಾಹುಲ್ ನಾರ್ವೇಕರ್ರನ್ನು ಸ್ಪೀಕರ್ ಆಗಿ ಆಯ್ಕೆ ಮಾಡುವ ಮೂಲಕ ಏಕನಾಥ್ ಶಿಂದೆ ಮೊದಲ ಪರೀಕ್ಷೆಯನ್ನು ಗೆದ್ದಿದ್ದಾರೆ. ಇಂದಿನ ವಿಶ್ವಾಸ ಮತವನ್ನೂ ಗೆದ್ದು ಸುಭದ್ರ ಸರ್ಕಾರಕ್ಕೆ ನಾಂದಿ ಹಾಡಲಿದ್ದಾರೆ.
ಇದನ್ನೂ ಓದಿ: ತೆಲಂಗಾಣದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಬಂದೇ ಬರುತ್ತದೆ: ಪ್ರಧಾನಿ ಮೋದಿ