ಅಗರ್ತಲಾ(ತ್ರಿಪುರ): ಬೋರ್ಡ್ಮೇಲೆ ಏನನಾದ್ದರೂ ಬರೆಯಲು ಪ್ರಯತ್ನಿಸುತ್ತಿರುವ ಈ ಬಾಲಕ ಹಿಂದೆಂದೂ ಶಾಲೆಯ ಮೆಟ್ಟಿಲು ಹತ್ತಿದವನೇ ಅಲ್ಲ. ಈತ ಎರಡು ದಿನದ ಹಿಂದೆಯಷ್ಟೇ ಶಾಲೆ ಎಂದರೇನು ಅನ್ನೋ ಕಲ್ಪನೆಯನ್ನ ಕಣ್ತುಂಬಿಕೊಂಡಿದ್ದಾನೆ.
ಪೆನ್ಸಿಲ್ ಹಿಡಿಯಲು ಈಗಷ್ಟೇ ಕಲಿತಿದ್ದು, ಅಗರ್ತಲಾದ ಬೀದಿ ಬದಿ ಮಕ್ಕಳೀಗ ಶಾಲೆ ಮೆಟ್ಟಿಲೇರಿದ್ದಾರೆ. ಇಲ್ಲಿ ಶಾಲೆಗೆ ದಾಖಲಾಗಿರುವ ಬಹುಪಾಲು ಮಕ್ಕಳು ಬಾಲ ಕಾರ್ಮಿಕರು. ಅವರಿಗೆ ಬರುವ ಬೆರಳೆಣಿಕೆ ಕಾಸನ್ನೂ ಎಣಿಸಲು ಸಹ ತಿಳಿದಿರಲಿಲ್ಲ. ಆದರೆ ಇಂತಹ ಮಕ್ಕಳ ಪಾಲಿಗೀಗ ಅಗರ್ತಲಾ ಕುಟುಂಬವೊಂದು ನೆರಳಾಗಿ ಬಂದಿದೆ. ಐವರು ಸಹೋದದರು ಈ ಮಕ್ಕಳಿಗೆ ಅಕ್ಷರ ಕಲಿಸುವ ಕಾರ್ಯಕ್ಕೆ ಮುಂದಾಗಿದ್ದು, ಈ ಮಕ್ಕಳಿಗೆ ಪಟ್ಟಣದ ಬಟಾಲಾ ಪ್ರದೇಶ ಫ್ಲೈಓವರ್ ಅಡಿಯಲ್ಲಿ ಶಿಕ್ಷಣ ನೀಡಲು ಪ್ರಾರಂಭಿಸಿದ್ದಾರೆ
ಬೀದಿ ಮಕ್ಕಳಿಗೆ ಮೂಲಭೂತ ಶಿಕ್ಷಣವನ್ನು ವ್ಯವಸ್ಥೆ ಮಾಡಲಾಗಿದ್ದು, ಈ ಮಕ್ಕಳನ್ನು ಔಪಚಾರಿಕ ಶಿಕ್ಷಣಕ್ಕೆ ಸಿದ್ಧಪಡಿಸಬಹುದು. ಇತ್ತೀಚೆಗೆ ಸ್ನಾತಕೋತ್ತರ ಪದವಿ ಪೂರೈಸಿದ ಜಯಂತ ಮಜುಂದಾರ್ ಅವರು ಬೀದಿ ಮಕ್ಕಳ ಪೋಷಕರಿಂದ ಉತ್ತಮ ಬೆಂಬಲ ಪಡೆದಿದ್ದಾರೆ. ಈ ಭಾಗದಲ್ಲಿ ಪ್ರತಿಯೊಬ್ಬರು ಈಗ ಮಕ್ಕಳನ್ನು ಅಕ್ಷರ ಕಲಿಸುವ ಸ್ಥಳಕ್ಕೆ ಕಳುಹಿಸಿಕೊಡಲು ಮುಂದಾಗಿದ್ದಾರೆ.
ಈ ಐವರು ಸಹೋದರರು ಬೀದಿ ಮಕ್ಕಳ ಓದಿಗಾಗಿ ಶ್ರಮಿಸುತ್ತಿದ್ದಾರೆ. ಇವರ ಸಾಮಾಜಿಕ ಕಳಕಳಿ ಗುರುತಿಸಿದ ಸ್ಥಳೀಯ ಪೊಲೀಸರು ಯುವಕರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದಾಗ ಪೋಷಕರು ಆಕ್ರೋಶಗೊಳ್ಳುವುದೂ ಉಂಟು, ಈ ವೇಳೆ ಪೊಲೀಸರೇ ಇವರಿಗೆ ತಿಳಿ ಹೇಳಿ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ.
ಅಗರ್ತಲಾದ ಈ ಐವರು ಸಹೋದರರು ತಾವು ಪಡೆದ ಶಿಕ್ಷಣದಿಂದ ಬೇರೆ ಬೇರೆ ಕ್ಷೇತ್ರದಲ್ಲಿ ಉದ್ಯೋಗ ಆರಿಸಿಕೊಳ್ಳಬಹುದಿತ್ತು. ಆದರೆ ತಾವು ಪಡೆದ ಶಿಕ್ಷಣವನ್ನೇ ಇನ್ನೊಬ್ಬರಿಗೆ ದಾರೆ ಎರೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ. ಜೊತೆಗೆ ಶಿಕ್ಷಣವನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಂಡು ಇತರರಿಗೂ ಮಾದರಿಯಾಗಿದ್ದಾರೆ. ಈ ಯುವಕರ ಹೊಸ ಪರೀಕ್ಷೆ ಬೀದಿ ಬದಿ ಮಕ್ಕಳ ಜೀವನಕ್ಕೆ ಹೊಸ ಭರವಸೆ ಮೂಡಿಸಿದೆ.