ಹೈದರಾಬಾದ್ (ತೆಲಂಗಾಣ): ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ದೆಹಲಿ ಮದ್ಯ ನೀತಿ ಹಗರಣ ತೆಲಂಗಾಣದಲ್ಲಿ ಸಂಚಲನ ಮೂಡಿಸುತ್ತಿದೆ. ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಹೈದರಾಬಾದ್‌ನಲ್ಲಿ ಸರಣಿ ಶೋಧ ನಡೆಸಿರುವುದು ಮಾತ್ರವಲ್ಲದೇ ಪ್ರಮುಖ ಉದ್ಯಮಿ ವೆನ್ಮನೇನಿ ಶ್ರೀನಿವಾಸ ರಾವ್ ಅವರನ್ನು ತಮ್ಮ ಕಚೇರಿಗೆ ಕರೆಸಿ ಸುಮಾರು ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ವೆನ್ಮನೇನಿ ಅವರ ಮನೆ ಮತ್ತು ಕಚೇರಿ ಮತ್ತು ರಾಮಂತಪುರ ಮತ್ತು ಮಾದಾಪುರದ ಐಟಿ ಕಂಪನಿಗಳಲ್ಲಿ ಶೋಧ ನಡೆಸಲಾಗಿದೆ. ದೆಹಲಿಯ ಮದ್ಯ ಪೂರೈಕೆ ಗುತ್ತಿಗೆ ಪಡೆದ ಕಂಪನಿಗಳಲ್ಲಿ ಹೂಡಿಕೆ ಮಾಡಿರುವುದು ಬೆಳಕಿಗೆ ಬಂದ ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಇಡಿ ಈ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.
ಇಂದು ವೆನ್ಮನೇನಿ ಶ್ರೀನಿವಾಸ ರಾವ್ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಅಗತ್ಯ ಬಿದ್ದರೆ ವಿಚಾರಣೆಗೆ ದೆಹಲಿಗೆ ಬರಬೇಕಾಗುತ್ತದೆ ಎಂದು ಇಡಿ ಅಧಿಕಾರಿಗಳು ಶ್ರೀನಿವಾಸ್ ರಾವ್ ಅವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಲವು ಕಡತ ಮತ್ತು ಹಾರ್ಡ್ ಡಿಸ್ಕ್ ಜಪ್ತಿ: ಅಲ್ಲದೇ, ಕಳೆದ ಶುಕ್ರವಾರ ಹೈದರಾಬಾದ್‌ನ ದೋಮಲ್‌ಗುಡಾದಲ್ಲಿರುವ ಗೋರಂಟ್ಲಾ ಅಸೋಸಿಯೇಟ್ಸ್ ಕಚೇರಿ ಸೇರಿದಂತೆ ದೇಶದ 40 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದ್ದರು. ಮದ್ಯ ಪೂರೈಕೆಯ ಗುತ್ತಿಗೆ ಪಡೆದಿರುವ ಹೈದರಾಬಾದ್ ಕಂಪನಿಗಳಿಗೆ ಈ ಗೋರಂಟ್ಲಾ ಅಸೋಸಿಯೇಟ್ಸ್ ಆಡಿಟಿಂಗ್ ನಡೆಸಿದೆಯಂತೆ. ಅದಕ್ಕಾಗಿಯೇ ಇಡಿ ಅಧಿಕಾರಿಗಳು ಇಲ್ಲಿ ಶೋಧ ಕಾರ್ಯ ನಡೆಸಿ ಅಪಾರ ಸಂಖ್ಯೆಯ ಕಡತಗಳು ಮತ್ತು ಹಾರ್ಡ್ ಡಿಸ್ಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ದೆಹಲಿ ಮದ್ಯ ನೀತಿ ಹಗರಣ: ಬೆಂಗಳೂರು, ಚೆನ್ನೈನಲ್ಲಿ ಆಂಧ್ರ ಸಂಸದನ ನಿವಾಸಗಳ ಮೇಲೆ ಇಡಿ ದಾಳಿ
ಜೊತೆಗೆ ಈ ದಾಖಲೆಗಳು ಹಾಗೂ ಹಾರ್ಡ್ ಡಿಸ್ಕ್‌ಗಳನ್ನು ವಿಶ್ಲೇಷಿಸಿದಾಗ ದೆಹಲಿಯ ಮದ್ಯದ ವ್ಯವಹಾರಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ಹಣದ ಹರಿವಿನ ವಿವರಗಳು ಪತ್ತೆಯಾಗಿದ್ದು, ಅದರ ಆಧಾರದ ಮೇಲೆ ಸೋಮವಾರ ಸಹ ಶೋಧ ಕಾರ್ಯ ನಡೆಸಲಾಗಿದೆ. ದೆಹಲಿಯಲ್ಲಿ ನೀಡಿದ ಲಂಚದಲ್ಲಿ ಭಾಗಿಯಾದ ಸಂಘಟನೆಗಳು ಇಲ್ಲಿಂದ ಹಣ ಪಡೆದಿವೆ ಎಂದು ಎಂಬ ಆರೋಪ ಕೇಳಿದೆ. ಹೀಗಾಗಿಯೇ ಇಡಿ ಅಧಿಕಾರಿಗಳು ಈ ಹಣ ಯಾರಿಗೆ ಸೇರಿದ್ದು ಎಂದು ಪತ್ತೆ ಹಚ್ಚಲು ಆರಂಭಿಸಿದ್ದಾರೆ. ಇದರ ಭಾಗವಾಗಿ ವೆನ್ಮನೇನಿ ಶ್ರೀನಿವಾಸ ರಾವ್ ಅವರನ್ನು ವಿಚಾರಣೆ ನಡೆಸಲಾಗಿದೆಯಂತೆ.
ಈ ವೆನ್ಮನೇನಿ ಶ್ರೀನಿವಾಸ ರಾವ್ ಯಾರು?: ರಾಜಣ್ಣ ಸಿರಿಸಿಲ್ಲ ಜಿಲ್ಲೆಯ ಮುಸ್ತಾಬಾದ್ ಮಂಡಲದ ಪೋಟುಗಲ್ ಗ್ರಾಮದ ವೆನ್ಮನೇನಿ ಶ್ರೀನಿವಾಸ ರಾವ್ ಹಲವಾರು ವ್ಯವಹಾರಗಳನ್ನು ಹೊಂದಿದ್ದಾರೆ. ಅದರಲ್ಲೂ ಕರೀಂನಗರದಲ್ಲಿ ಗ್ರಾನೈಟ್ ಹಾಗೂ ವಾರಂಗಲ್ ಮತ್ತು ಖಮ್ಮಂ ಜಿಲ್ಲೆಗಳಲ್ಲಿ ಮರಳು ಕ್ವಾರಿಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಹೈದರಾಬಾದ್‌ನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಶ್ರೀನಿವಾಸ ರಾವ್, ರಾಜ್ಯದ ಪ್ರಮುಖ ರಾಜಕಾರಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಮೇಲಾಗಿ ಇದೇ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾದ ಅರುಣ್ ರಾಮಚಂದ್ರ ಪಿಳ್ಳೈ ಅವರ ರಾಬಿನ್ ಡಿಸ್ಟಿಲರೀಸ್ ಸಹ ನಿರ್ದೇಶಕರಾಗಿರುವ ಪ್ರೇಮಸಾಗರ ಗಂದ್ರ ಅವರ ಸೋದರ ಮಾವ ಶ್ರೀನಿವಾಸ ರಾವ್ ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ: ಸಚಿವ ಸಿಸೋಡಿಯಾ ಸೇರಿ 13 ಮಂದಿಗೆ ಸಿಬಿಐ ಲುಕ್ ಔಟ್ ನೋಟಿಸ್
ಇದರಿಂದಾಗಿಯೇ ನೆಲ ಹಂತದಿಂದ ದೆಹಲಿ ಮದ್ಯದ ಗುತ್ತಿಗೆಗಳವರೆಗೆ ಹಣ ಹಂತ ಹಂತವಾಗಿ ಸಾಗಿದೆ ಎಂದು ಇಡಿ ಶಂಕೆ ವ್ಯಕ್ತಪಡಿಸಿದೆ. ಇವರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಇಡಿ ಕ್ರಮ ಕೈಗೊಳ್ಳಲು ಆರಂಭಿಸಿದೆ.
ಆ ಸಾಫ್ಟ್‌ವೇರ್ ಕಂಪನಿಗಳ ಮಾಲೀಕತ್ವ ಯಾರು?: ಬಂಜಾರ ಹಿಲ್ಸ್‌ನಲ್ಲಿರುವ ವೆಣ್ಮನೇನಿ ಅವರ ಮನೆ ಮತ್ತು ಕಚೇರಿಗಳಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಮಾದಾಪುರ ಮತ್ತು ರಾಮಂತಪುರ (ಪ್ರಗತಿನಗರ) ದಲ್ಲಿರುವ ಎರಡು ಸಾಫ್ಟ್‌ವೇರ್ ಕಂಪನಿಗಳಲ್ಲಿಯೂ ಹುಡುಕಾಟ ನಡೆಸಲಾಗಿದೆ.
ಸಾಫ್ಟ್‌ವೇರ್ ಅಭಿವೃದ್ಧಿಗಾಗಿ 2016ರಲ್ಲಿ ಸ್ಥಾಪಿಸಲಾದ ಕಂಪನಿಯನ್ನು ಕಳೆದ ವರ್ಷ ನವೆಂಬರ್‌ನಲ್ಲಿ ರಾಮಂತಪುರಕ್ಕೆ ಸ್ಥಳಾಂತರಿಸಲಾಯಿತು. ಅದರಲ್ಲಿ ನಾಲ್ವರು ನಿರ್ದೇಶಕರಿದ್ದಾರೆ. ರಾಜ್ಯದ ಕೆಲವು ಪ್ರಮುಖ ರಾಜಕಾರಣಿಗಳು ಈ ಸಂಸ್ಥೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ನಂಬಲಾಗಿದೆ. ಜೊತೆಗೆ ಮಾದಾಪುರದ ಗುಟ್ಲ ಬೇಗಂಪೇಟೆಯಲ್ಲಿ 2019ರಲ್ಲಿ ಸ್ಥಾಪಿಸಲಾದ ಮತ್ತೊಂದು ಸಾಫ್ಟ್‌ವೇರ್ ಕಂಪನಿಯಲ್ಲೂ ಶೋಧ ಕಾರ್ಯ ನಡೆಸಲಾಗಿದ್ದು, ಈ ಕಂಪನಿಗೆ ಮೂವರು ನಿರ್ದೇಶಕರಿದ್ದಾರೆ.
ಅಂತಿಮ ಹಂತಕ್ಕೆ ತನಿಖೆ? ಇತ್ತೀಚಿನ ಇಡಿ ದಾಳಿ ಮತ್ತು ಹುಡುಕಾಟಗಳ ಹಿನ್ನೆಲೆಯಲ್ಲಿ ದೆಹಲಿ ಮದ್ಯ ನೀತಿ ಹಗರಣ ಪ್ರಕರಣದ ತನಿಖೆ ಅಂತಿಮ ಹಂತವನ್ನು ತಲುಪಿದೆ. ಹೂಡಿಕೆಗಳು ಎಲ್ಲಿಂದ ಪ್ರಾರಂಭವಾದವು?. ಆ ಹೂಡಿಕೆ ಎಲ್ಲಿಗೆ ತಲುಪಿದ್ದಾರೆ ಎಂಬುದನ್ನು ಪತ್ತೆ ಹಚ್ಚುವಲ್ಲಿ ಇಡಿ ಅಧಿಕಾರಿಗಳು ಯಶಸ್ವಿಯಾಗಿದ್ದು, ಶೀಘ್ರವೇ ಇತರ ಕೆಲ ಪ್ರಮುಖರಿಗೆ ನೋಟಿಸ್ ಜಾರಿ ಮಾಡಿ ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಈ ಪ್ರಕರಣ ಮತ್ತಷ್ಟು ಸಂಚಲನ ಮೂಡಿಸುವ ನಿರೀಕ್ಷೆಯೂ ಇದೆ.
ಇದನ್ನೂ ಓದಿ: ದೆಹಲಿ ಹೊಸ ಅಬಕಾರಿ ನೀತಿಯನ್ನು ಕೇವಲ ಹಗರಣಕ್ಕಾಗಿ ಸಿದ್ಧಪಡಿಸಲಾಗಿದೆ: ಸುಧಾಂಶು ತ್ರಿವೇದಿ