ಪಾಟ್ನಾ (ಬಿಹಾರ): ರೈಲ್ವೆ ಇಲಾಖೆಯಲ್ಲಿನ ಉದ್ಯೋಗಕ್ಕಾಗಿ ಭೂ ಹಗರಣದಲ್ಲಿ ಆರ್ಜೆಡಿ ವರಿಷ್ಠ, ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಕುಟುಂಬಕ್ಕೆ ಸಂಕಷ್ಟ ಇನ್ನೂ ಕಡಿಮೆಯಾಗಿಲ್ಲ. ಲಾಲು ಕುಟುಂಬದ ಹಲವರ ವಿಚಾರಣೆ ನಡೆಸುತ್ತಿರುವ ಕೇಂದ್ರ ತನಿಖಾ ತಂಡಗಳು ಇಂದು ಲಾಲು ಅವರ ಮತ್ತೊಬ್ಬ ಪುತ್ರಿ ಚಂದಾ ಯಾದವ್ ಅವರನ್ನು ವಿಚಾರಣೆಗೆ ಒಳಪಡಿಸಿವೆ.
ಇದನ್ನೂ ಓದಿ: ಲಾಲು ಹಾಗೂ ಸಂಬಂಧಿಕರ ಮೇಲೆ ಇಡಿ, ಸಿಬಿಐ ದಾಳಿ ಬಗ್ಗೆ ನಿತೀಶ್ ಕುಮಾರ್ ಅಸ್ಪಷ್ಟ ಹೇಳಿಕೆ
ಕೇಂದ್ರದಲ್ಲಿ ಲಾಲು ಪ್ರಸಾದ್ ರೈಲ್ವೆ ಸಚಿವರಾಗಿದ್ದಾಗ ನಡೆದಿರುವ ಹಗರಣದ ಬಗ್ಗೆ ಸಿಬಿಐ ಮತ್ತು ಇಡಿ ಪ್ರತ್ಯೇಕ ತನಿಖೆ ನಡೆಸುತ್ತಿವೆ. ಲಾಲು ಮಕ್ಕಳಾದ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಪುತ್ರಿ ರಾಗಿಣಿ ಯಾದವ್, ಮಿಸಾ ಭಾರತಿ ಅವರನ್ನು ತನಿಖಾ ಅಧಿಕಾರಿಗಳು ಇದುವರೆಗೆ ವಿಚಾರಣೆ ನಡೆಸಿದ್ದರು. ಇದೀಗ ಚಂದಾ ಯಾದವ್ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಹಿಂದೆ ಡಿಸಿಎಂ ತೇಜಸ್ವಿ ಯಾದವ್ ಮತ್ತು ಸಂಸದೆ ಮಿಸಾ ಭಾರ್ತಿ ಒಂದೇ ದಿನ ಪ್ರತ್ಯೇಕ ತನಿಖಾ ಸಂಸ್ಥೆಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ತೇಜಸ್ವಿ ಸಿಬಿಐ ವಿಚಾರಣೆ ಎದುರಿಸಿದ್ದರೆ, ಮಿಸಾ ಭಾರ್ತಿ ಇಡಿ ವಿಚಾರಣೆ ಎದುರಿಸಿದ್ದರು. ಈ ವೇಳೆ ಮಾತನಾಡಿದ್ದ ತೇಜಸ್ವಿ, ತನಿಖಾ ತಂಡಗಳು ಪ್ರಕರಣಗಳನ್ನು ದಾಖಲಿಸಿದ ಪ್ರತಿ ಸಂದರ್ಭದಲ್ಲೂ ನಾವು ಸಹಕರಿಸುತ್ತಿದ್ದೇವೆ. ಸದ್ಯದ ದೇಶದಲ್ಲಿ ಪರಿಸ್ಥಿತಿ ಏನಾಗಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. ತಲೆ ಬಾಗುವುದು ತುಂಬಾ ಸುಲಭ. ಆದರೆ, ಹೋರಾಡುವುದು ಬಹಳ ಕಷ್ಟಕರ. ನಾವು ಇದರ ವಿರುದ್ಧ ಹೋರಾಡಲು ನಿರ್ಧರಿಸಿದ್ದೇವೆ ಮತ್ತು ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪದೇ ಪದೇ ದಾಳಿ ಮಾಡೋ ಬದಲು ನಮ್ಮ ಮನೆಯಲ್ಲೇ ಸಿಬಿಐ ಕಚೇರಿ ತೆರೆದರೆ ಉತ್ತಮ: ತೇಜಸ್ವಿ ಯಾದವ್
ಪ್ರಕರಣದ ಹಿನ್ನೆಲೆ: ಲಾಲು ಪ್ರಸಾದ್ 2005ರಿಂದ 2009ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದರು. ಆ ಅವಧಿಯಲ್ಲಿ ಉದ್ಯೋಗಕ್ಕಾಗಿ ಭೂ ಹಗರಣ ನಡೆದಿದೆ ಎನ್ನಲಾಗಿದೆ. ಜನರಿಗೆ ಉದ್ಯೋಗಗಳನ್ನು ನೀಡಿ ಅವರ ಜಮೀನುಗಳನ್ನು ಆಪ್ತ ಸಹಾಯಕರ ಹೆಸರಿಗೆ ನೋಂದಾಯಿಸಲಾಗಿದೆ. ನಂತರ ಅದೇ ಜಮೀನುಗಳನ್ನು ಲಾಲು ಪ್ರಸಾದ್ ಅವರ ಕುಟುಂಬದ ಸದಸ್ಯರ ಹೆಸರಿಗೆ ವರ್ಗಾಯಿಸಿದ ಆರೋಪ ಇದೆ. ಈ ಬಗ್ಗೆ ಸಿಬಿಐ ಮತ್ತು ಇಡಿ ಪ್ರತ್ಯೇಕ ತನಿಖೆ ನಡೆಸುತ್ತೇವೆ.
ಈ ಸಂಬಂಧ ಲಾಲು ಪ್ರಸಾದ್, ರಾಬ್ರಿ ದೇವಿ, ಮಿಸಾ ಭಾರತಿ ಸೇರಿದಂತೆ 16 ಆರೋಪಿಗಳಿಗೆ ಈ ಹಿಂದೆ ಸಿಬಿಐ ಸಮನ್ಸ್ ಜಾರಿಗೊಳಿಸಲಾಗಿತ್ತು. ಅಲ್ಲದೇ, ಬಿಹಾರದ ಪಾಟ್ನಾದಲ್ಲಿರುವ ನಿವಾಸದಲ್ಲಿ ಲಾಲು ಕುಟುಂಬದವರನ್ನು ಅಧಿಕಾರಿಗಳು ವಿಚಾರಣೆಗೂ ಒಳಪಡಿಸಿದ್ದರು. ಕೆಲ ದಿನಗಳ ಹಿಂದೆ ಜಾರಿ ನಿರ್ದೇಶನಾಲಯವು ಲೆಕ್ಕಕ್ಕೆ ಸಿಗದ ಒಂದು ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿತ್ತು. ಅಷ್ಟೇ ಅಲ್ಲ, ಶೋಧ ಕಾರ್ಯದ ವೇಳೆ 600 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆದಾಯವನ್ನು ಪತ್ತೆಯಾಗಿದೆ ಎಂದು ಹೇಳಿತ್ತು.
ಇದನ್ನೂ ಓದಿ: ಉದ್ಯೋಗಕ್ಕಾಗಿ ಭೂ ಹಗರಣ: ಸಿಬಿಐನಿಂದ ತೇಜಸ್ವಿ ಯಾದವ್ ವಿಚಾರಣೆ.. ಸಹೋದರಿ ಮಿಸಾ ಭಾರ್ತಿಗೆ ಇಡಿ ಗ್ರಿಲ್