ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಪತ್ರಿಕೆ ಮತ್ತು ಅದರ ಇತರ ಕಂಪನಿಗಳ 752 ಕೋಟಿ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿಗಳನ್ನು ಮಂಗಳವಾರ ಜಪ್ತಿ ಮಾಡಿದೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವ ಹೊಂದಿರುವ ಕಾಂಗ್ರೆಸ್ನ ಯಂಗ್ ಇಂಡಿಯನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ 751.9 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಪತ್ರಿಕೆಯ ಪ್ರಕಾಶಕ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಮತ್ತು ಅದರ ಹಿಡುವಳಿ ಕಂಪನಿ ಯಂಗ್ ಇಂಡಿಯನ್ ಸಂಸ್ಥೆ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ಕ್ರಮ ಜರುಗಿಸಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ.
ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ದೆಹಲಿ, ಮಹಾರಾಷ್ಟ್ರದ ಮುಂಬೈ ಮತ್ತು ಉತ್ತರ ಪ್ರದೇಶದ ಲಖನೌ ಸೇರಿದಂತೆ ಅನೇಕ ನಗರಗಳಲ್ಲಿ ಸುಮಾರು 661.69 ಕೋಟಿ ರೂಪಾಯಿಗಳಷ್ಟು ಸ್ಥಿರಾಸ್ತಿಗಳ ರೂಪದಲ್ಲಿ ಅಕ್ರಮ ಸಂಪತ್ತನ್ನು ಹೊಂದಿದೆ. ಯಂಗ್ ಇಂಡಿಯನ್ ಸಂಸ್ಥೆ ಕೂಡ ಕಾನೂನು ಬಾಹಿರ ಆಸ್ತಿಯನ್ನು ಹೊಂದಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಎಜೆಎಲ್‌ನ ಈಕ್ವಿಟಿ ಷೇರುಗಳಲ್ಲಿ ಹೂಡಿಕೆಯ ರೂಪದಲ್ಲಿ 90.21 ಕೋಟಿ ರೂ. ಹೊಂದಿದೆ ಎಂದು ಇಡಿ ಆರೋಪಿಸಿದೆ.
ನ್ಯಾಷನಲ್ ಹೆರಾಲ್ಡ್ ಅನ್ನು ಎಜೆಎಲ್ ಪ್ರಕಟಿಸಿದೆ. ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದೆ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಯಂಗ್ ಇಂಡಿಯನ್‌ನ ಬಹುಪಾಲು ಷೇರುದಾರರಾಗಿದ್ದು, ಅವರು ತಲಾ ಶೇಕಡಾ 38 ರಷ್ಟು ಷೇರುಗಳನ್ನು ಹೊಂದಿದ್ದಾರೆ. ಪಿಎಂಎಲ್‌ಎ ಅಡಿ ತನಿಖೆ ನಡೆಸುತ್ತಿರುವ ಮನಿ ಲಾಂಡರಿಂಗ್ ಪ್ರಕರಣದಲ್ಲಿ 751.9 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲು ಆದೇಶ ಹೊರಡಿಸಿದೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ್ ಬನ್ಸಾಲ್, ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು ಅವರ ಸಂಸದ ಸಹೋದರ ಡಿ ಕೆ ಸುರೇಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಅವರ ಹೇಳಿಕೆಗಳನ್ನೂ ಈಗಾಗಲೇ ದಾಖಲಿಸಲಾಗಿದೆ.
ವಿಶ್ವಕಪ್ ಸೋಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಾರಣ, ಅವರು ಶಕುನವಿದ್ದಂತೆ ಎಂದು ಸಂಸದ ರಾಹುಲ್ ಗಾಂಧಿ ಟೀಕಿಸಿದ ಬೆನಲ್ಲೇ, ಇಡಿ ಈ ಮಹತ್ವದ ಆದೇಶ ಹೊರಡಿಸಿದೆ. ಇದು ಕಾಂಗ್ರೆಸ್ನ ಟೀಕೆಗೆ ಗುರಿಯಾಗಿದೆ. ಕೇಂದ್ರೀಯ ತನಿಖಾ ಸಂಸ್ಥೆ ಬಿಜೆಪಿಯ ಪಾಲುದಾರ ಸಂಸ್ಥೆಯಾಗಿದೆ. ಪಂಚ ರಾಜ್ಯ ಚುನಾವಣೆಗಳಲ್ಲಿ ಸೋಲಿನ ಭೀತಿಯಿಂದಾಗಿ ಇಡಿಯನ್ನು ಮತ್ತೆ ಛೂ ಬಿಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಜೈಲಿಗೆ ಹೋಗುತ್ತಾರೆ : ಸುಬ್ರಮಣಿಯನ್ ಸ್ವಾಮಿ