ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ತಮಿಳುನಾಡಿನಾದ್ಯಂತ 36 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಸ್ಥಿರಾಸ್ತಿ ಮತ್ತು ಉದಯನಿಧಿ ಸ್ಟಾಲಿನ್ ಫೌಂಡೇಶನ್ನ ಬ್ಯಾಂಕ್ ಖಾತೆಯಲ್ಲಿ ಇರಿಸಲಾಗಿದ್ದ 34.7 ಲಕ್ಷ ರೂ.ಗಳನ್ನು ಜಪ್ತಿ ಮಾಡಿರುವುದಾಗಿ ಇಡಿ (ಜಾರಿ ನಿರ್ದೇಶನಾಲಯ) ಶನಿವಾರ ತಿಳಿಸಿದೆ.
ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್ಎ) ವಿವಿಧ ಸೆಕ್ಷನ್‌ಗಳ ಅಡಿ ತನಿಖೆ ನಡೆಸಲಾಗುತ್ತಿದ್ದು, ಕಲ್ಲಾಲ್ ಗ್ರೂಪ್ ಮತ್ತು ಯುಕೆ ಮೂಲದ ಲೈಕಾ ಗ್ರೂಪ್ ಮತ್ತು ಅದರ ಭಾರತೀಯ ಕಂಪನಿಗಳಾದ ಲೈಕಾ ಪ್ರೊಡಕ್ಷನ್ಸ್, ಲೈಕಾ ಹೋಟೆಲ್ಸ್ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಇಡಿ ಇತ್ತೀಚೆಗೆ ಏಪ್ರಿಲ್ ಮತ್ತು ಈ ತಿಂಗಳ ಆರಂಭದಲ್ಲಿ ಎರಡು ಸಂಸ್ಥೆಗಳ ಮೇಲೆ ದಾಳಿ ಮಾಡಿ ಶೋಧ ನಡೆಸಿದ್ದರು.
ಚೆನ್ನೈನ ಸೆಂಟ್ರಲ್ ಕ್ರೈಂ ಬ್ರಾಂಚ್ ದಾಖಲಿಸಿದ ಎಫ್ಐಆರ್ ಆಧಾರದ ಮೇಲೆ ತನಿಖೆಯನ್ನು ನಡೆಸಲಾಗುತ್ತಿದೆ. ಪೆಟ್ಟಿಗೋ ಕಮರ್ಷಿಯೋ ಇಂಟರ್‌ನ್ಯಾಷನಲ್ ಎಲ್‌ಡಿಎಯ ನಿರ್ದೇಶಕ ಹಾಗೂ ದೂರುದಾರ ಗೌರವ್ ಚಚ್ರಾ ಅವರಿಗೆ ಕಲ್ಲಲ್ ಗ್ರೂಪ್ ಮತ್ತು ಅದರ ನಿರ್ದೇಶಕರು ಮತ್ತು ಸಂಸ್ಥಾಪಕರಾದ ಶರವಣನ್ ಪಳನಿಯಪ್ಪನ್, ವಿಜಯಕುಮಾರನ್, ಅರವಿಂದ್ ರಾಜ್ ಮತ್ತು ವಿಜಯ್ ಅನಂತ್, ಲಕ್ಷ್ಮಿ ಮುತ್ತುರಾಮನ್ ಮತ್ತು ಪ್ರೀತಾ ವಿಜಯಾನಂದ್ ಅವರು 114.37 ಕೋಟಿ ರೂ. ವಂಚಿಸಿದ್ದಾರೆ ಎಂದು ಇಡಿ ತಿಳಿಸಿದೆ.
ಪೆಟ್ಟಿಗೋ ಯುಕೆ ಮೂಲದ ಲೈಕಾ ಗ್ರೂಪ್ನ ಅಂಗಸಂಸ್ಥೆಯಾಗಿದ್ದು, ಭಾರತದಲ್ಲಿ ಲೈಕಾ ಪ್ರೊಡಕ್ಷನ್ಸ್, ಲೈಕಾ ಹೋಟೆಲ್‌ಗಳನ್ನು ನಡೆಸುತ್ತಿದೆ. ಲೈಕಾ ಗ್ರೂಪ್ ಮತ್ತು ಅದರ ಘಟಕಗಳಿಗೆ ಯಾವುದೇ ಆಧಾರವಿಲ್ಲದೇ ಅನೈತಿಕವಾಗಿ ಹೂಡಿಕೆಗಳು ಮತ್ತು ಸಾಲಗಳನ್ನು ನೀಡಿದ್ದರಿಂದ ವಂಚನೆ ವಾಸ್ತವವಾಗಿ 300 ಕೋಟಿ ರೂ.ಗಳ ಗಡಿ ದಾಟಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ:ತಮಿಳುನಾಡಿನಲ್ಲೂ ಆವಿನ್ vs ಅಮುಲ್... ತಮಿಳರಿಂದ ಭಾರಿ ವಿರೋಧ!
ತನಿಖೆ ವೇಳೆ ಕಂಡು ಬಂದ ಭಾರಿ ಅಕ್ರಮದ ಹಿನ್ನೆಲೆ ಆರೋಪಿಗಳ ವಿರುದ್ಧ ಇಡಿ ಶೋಧ ಕಾರ್ಯ ನಡೆಸಲು ಪ್ರಮುಖ ಕಾರಣವಾಗಿದೆ. ಡಿಜಿಟಲ್ ಪುರಾವೆಗಳು, ದಾಖಲೆಗಳು, ಆಸ್ತಿಗಳು, ಅನುಮಾನಾಸ್ಪದ ನಗದು ಮತ್ತು ಹವಾಲಾ ವಹಿವಾಟುಗಳ ರೂಪದಲ್ಲಿ ವಿವಿಧ ದೋಷಾರೋಪಣೆ ಪುರಾವೆಗಳನ್ನು ಕಂಡುಹಿಡಿಯಲು ಇಡಿ ತನಿಖೆ ಚುರುಕುಗೊಳಿಸಿದೆ ಎಂದು ಫೆಡರಲ್ ಏಜೆನ್ಸಿ ತಿಳಿಸಿದೆ. ಉದಯನಿಧಿ ಸ್ಟಾಲಿನ್ ಫೌಂಡೇಶನ್ನ ಬ್ಯಾಂಕ್ ಖಾತೆಯಲ್ಲಿ ಲಭ್ಯವಿದ್ದ 34.7 ಲಕ್ಷ ರೂ ಮತ್ತು ತಮಿಳುನಾಡಿನಾದ್ಯಂತ 36.3 ಕೋಟಿ ಮೌಲ್ಯದ ವಿವಿಧ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ ಮೇ. 25 ರಂದು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
ಲೈಕಾ ಪ್ರೊಡಕ್ಷನ್ಸ್ ತಮಿಳು ಮತ್ತು ಹಿಂದಿ ಚಲನಚಿತ್ರಗಳ ನಿರ್ಮಾಣ ಮತ್ತು ವಿತರಣೆಯಲ್ಲಿ ತೊಡಗಿರುವ ಮನರಂಜನಾ ಕಂಪನಿಯಾಗಿದೆ ಮತ್ತು ಇದು ಇತ್ತೀಚೆಗೆ ಎರಡು ಭಾಗಗಳಲ್ಲಿ ನಿರ್ಮಾಣವಾದ ತಮಿಳು ಚಿತ್ರಗಳಾದ ಪೊನ್ನಿಯಿನ್ ಸೆಲ್ವನ್ 1 ಮತ್ತು ಪೊನ್ನಿಯಿನ್ ಸೆಲ್ವನ್ II ಇತ್ತೀಚಿಗೆ ಬಾರಿ ಸದ್ದು ಮಾಡಿದ್ದವು.
ಇದನ್ನೂ ಓದಿ:'ಸಾರೆ ಜಹಾನ್ ಸೆ ಅಚ್ಚಾ' ಕವಿ ಮೊಹಮ್ಮದ್ ಇಕ್ಬಾಲ್ ಅಧ್ಯಾಯ ಬಿಎ ಪಠ್ಯಕ್ರಮದಿಂದ ಕೈಬಿಟ್ಟ ದೆಹಲಿ ವಿವಿ